ಬೆಂಗಳೂರು, ಡಿಸೆಂಬರ್ 16: ಕರ್ನಾಟಕದಲ್ಲಿ ಮಳೆಯ ವಾತಾವರಣ ಕಡಿಮೆ ಆಗುತ್ತಿದ್ದಂತೆ ಇನ್ನಿಲ್ಲದಂತೆ ಚಳಿ ಕಾಡುತ್ತಿದೆ. ಚಂಡಮಾರುತ ಪರಿಚಲನೆ ನಡುವೆಯು ರಾಜ್ಯಾದ್ಯಂತ ಸೋಮವಾರ ಒಣಹವೆಯ ವಾತಾವರಣ ನಿರ್ಮಾಣವಾಗಿದೆ. ಎಲ್ಲೋ ಒಂದೆರಡು ಕಡೆಗಳಲ್ಲಿ ಸಣ್ಣ ಮಳೆ ಬರಬಹುದು, ಬಿಟ್ಟರೆ ಅಧಿಕ ಬಿಸಿಲು ಹಾಗೂ ತೀವ್ರ ಚಳಿಯು ಮುಂದುವರಿಯಲಿದೆ.
ರಾಜ್ಯದ ಅತೀ ಕನಿಷ್ಠ ತಾಪಮಾನ ಎರಡು ಜಿಲ್ಲೆಗಳಲ್ಲಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನಿರ್ದೇಶಕ ಮತ್ತು ವಿಜ್ಞಾನಿ ಡಾ.ಸಿ.ಎಸ್. ಪಾಟೀಲ್ ಅವರು ಮುನ್ಸೂಚನೆ ನೀಡಿದ್ದಾರೆ.
ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಕ್ಕಿಂತ ಉತ್ತರ ಒಳನಾಡು (ಉತ್ತರ ಕರ್ನಾಟಕ) ಭಾಗದಲ್ಲಿ ಚಳಿ ವಿಪರೀತವಾಗಿ ಹೆಚ್ಚಾಗಿದೆ. ಈ ಭಾಗದವರು ಹಿರಿಯರು ಹೇಳುವಂತೆ ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆ ವೇಳೆಗೆ ಅತ್ಯಧಿಕ ಚಳಿ ವಾತಾವರಣ ನಿರ್ಮಾಣವಾಗುತ್ತಿದೆ.
ಈ ಮಾತಿಗೆ ಪೂರಕವೆಂಬಂತೆ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಅಂದರೆ ಭಾನುವಾರ ಹುಣ್ಣಿಮೆಯ ದಿನ ಬೀದರ್‌ನಲ್ಲಿ ರಾಜ್ಯದ ಅತೀ ಕನಿಷ್ಠ ತಾಪಮಾನ 7.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದೇ ವೇಳೆ ವಿಜಯಪುರದಲ್ಲಿ 8 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ.
ಅಧಿಕ ಚಳಿ, ಕಡಿಮೆ ತಾಪಮಾನದ ಜಿಲ್ಲೆಗಳ ವಿವರ
ಈ ಎರಡು ಜಿಲ್ಲೆಗಳಲ್ಲಿ ರಾಜ್ಯದ ಅತೀ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ವರ್ಷದ ಅತೀ ಕನಿಷ್ಠ ತಾಪಮಾನ ಎನ್ನಲಾಗಿದೆ. ಇವು ಸೇರಿ ಉಳಿದ ಜಿಲ್ಲೆಗಳಲ್ಲೂ ತಾಪಮಾನದಲ್ಲಿ ತೀವ್ರ ಇಳಿಕೆ ಆಗಿದೆ. ಬಾಗಲಕೋಟೆಯಲ್ಲಿ 12, ಕಲಬುರಗಿ 13, ಹಾವೇರಿ 12.6, ರಾಯಚೂರು 12, ಕೊಪ್ಪಳ 14.6, ಧಾರವಾಡ 11.8, ಬೆಳಗಾವಿ ನಗರ 14, ಗದಗ 12.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಐಎಂಡಿ ಪ್ರಕಾರ, ಈ ಎಲ್ಲೆ ಜಿಲ್ಲೆಗಳಲ್ಲಿ ವಾಡಿಕೆಗಿಂತ – 2.1ರಿಂದ -7.5ರಷ್ಟು ಕಡಿಮೆ ಉಷ್ಣಾಂಶ ದಾಖಲಾಗಿದೆ.
ರಾಜ್ಯಾದ್ಯಂತ ಬೆಳಗ್ಗೆ ಮತ್ತು ಸಂಜೆ ನಂತರ ಚಳಿ ಹಾಗೂ ಮಂಜು ಕವಿಯುತ್ತಿದ್ದು, ಇಡೀ ದಿನ ಅಧಿಕ ಬಿಸಲಿನ ಹವೆ ಸೃಷ್ಟಿಯಾಗುತ್ತಿದೆ. ಈ ಒಣ ಹವೆ ವಾತಾವರಣ ಹೀಗೆ ಮುಂದುವರಿಯಲಿದೆ.

ವಾಯುಭಾರ ಕುಸಿತದ ತೀವ್ರತೆ ಹೆಚ್ಚಾದರೆ ಮಳೆ ಸಾಧ್ಯತೆ
ಒಂದು ವೇಳೆ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತವು ಚಂಡಮಾರುತ ಪರಿಚಲನೆ ಆಗುವ ಹಂತದಲ್ಲಿದೆ. ಅದು ತೀವ್ರಗೊಂಡರೆ ಮಾತ್ರವೇ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾನಸ, ಚಿಕ್ಕಮಗಳೂರು, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ ಕಡೆಗೆ ಚಳಿ, ಬಿಸಿಲು ಕಡಿಮೆ ಆಗಿ ಸಾಧಾರಣದಿಂದ ಭಾರೀ ಮಳೆ ಆಗಬಹುದು. ಸದ್ಯಕ್ಕೆ ಭಾರೀ ಮಳೆಯ ಎಚ್ಚರಿಕೆ ಇಲ್ಲ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಇನ್ನೂ ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಸಾಮಾನ್ಯ ವಾತಾವರಣವಿದ್ದು, ಒಣಹವೆ ಮುಂದುವರಿದಿದೆ. ಕೆಲವೆಡೆ ಹಗುರ ಮಳೆ ಆಗಬಹುದು ಎನ್ನಲಾಗಿದೆ. ರಾಜ್ಯಾದ್ಯಂತ ಈ ವಾರಪೂರ್ತಿ ಇದೇ ರೀತಿ ಶುಷ್ಕ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಬೆಂಗಳೂರಲ್ಲೂ ಚಳಿ ಏರಿಕೆ
ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಶುಷ್ಕ ವಾತಾವರಣ ಮುಂದುವರಿಯಲಿದೆ. ಬೆಂಗಳೂರು ನಗರದಲ್ಲಿ ಕನಿಷ್ಠ ತಾಪಮಾನ 15 ಡಿ.ಸೆ, ಬೆಂಗಳೂರು ಕೆಐಎಎಲ್ 14.5. ಡಿ.ಸೆ ದಾಖಲಾಗಿದೆ. ಬೆಳಗ್ಗೆ ರಾತ್ರಿ ದಟ್ಟ ಮಂಜು ಕವಿಯುವ ಜೊತೆಗೆ ಹೆಚ್ಚಿನ ಚಳಿ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Published by
