ಬೆಂಗಳೂರು: ಶ್ವೇತಾ ಗೌಡ ಎಂಬ ಮಹಿಳೆ ಚಿನ್ನಾಭರಣ (Gold) ಖರೀದಿಸಿ ಮಾಲೀಕರಿಗೆ ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ (Varthur Prakash) ಅವರ ಹೆಸರು ಕೇಳಿಬಂದಿದ್ದು, ಇಂದು ವರ್ತೂರು ಪ್ರಕಾಶ್ ಅವರು ವಿಚಾರಣೆಗೆ (Inquiry) ಹಾಜರಾಗಿದ್ದಾರೆ.
ಈ ಹಿಂದೆ 2 ಬಾರಿ ನೋಟೀಸ್ ಕೊಟ್ಟರು ವರ್ತೂರು ಪ್ರಕಾಶ್ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಮತ್ತೆ ನೋಟೀಸ್ ನೀಡಲಾಗಿತ್ತು. ಒಂದು ವೇಳೆ ಇಂದೂ ಕೂಡ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸುವ (Arrest) ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದಾರೆ.
ತನಿಖಾಧಿಕಾರಿ ಆಗಿರುವ ಎಸಿಪಿ ಗೀತಾ ಅವರ ಮುಂದೆ ವರ್ತೂರು ಪ್ರಕಾಶ್ ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ 10.5 ಲಕ್ಷ ನಗದು ಹಾಗು 100 ಗ್ರಾಂ ಚಿನ್ನವನ್ನು ವರ್ತೂರು ಪ್ರಕಾಶ್ ಪೊಲೀಸರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
‘ಆಕೆ ಹೀಗೆ ಮಾಡುತ್ತಾಳೆಂದು ನನಗೆ ಗೊತ್ತಿಲ್ಲ’
ವಿಚಾರಣೆಗೆ ಹಾಜರಾಗಿರುವ ಮಾಜಿ ಸಚಿವರ ಮುಂದೆ ಹಲವು ಪ್ರಶ್ನೆಗಳನ್ನಿಟ್ಟಿರುವ ಪೊಲೀಸರು ಅವರ ಹೇಳಿಕೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇನ್ನು ಈ ವೇಳೆ ವರ್ತೂರು ಪ್ರಕಾಶ್ ಅವರು 10 ಲಕ್ಷ ಐವತ್ತು ಸಾವಿರ ರೂಪಾಯಿ ನಗದು, ಮೂರು ಬ್ರೇಸ್ಲೈಟ್ ಹಾಗೂ ಒಂದು ಚಿನ್ನದ ಉಂಗುರ ವಾಪಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆಕೆ ಹೀಗೆ ಮಾಡುತ್ತಾಳೆಂದು ನನಗೆ ಗೊತ್ತಿಲ್ಲ. ನನಗೂ ಶ್ವೇತಗೌಡಳಿಗೂ ಯಾವುದೇ ಸಂಬಂಧವಿಲ್ಲ. ಗಿಫ್ಟ್ ಎಂದು ನನಗೆ ಆಕೆ ಕೆಲ ಒಡವೆ ನೀಡಿದ್ದಳು ಎಂದು ಪೊಲೀಸರ ಮುಂದೆ ವರ್ತೂರು ಪ್ರಕಾಶ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವರಿಗೂ ಚಿನ್ನ ನೀಡಿದ್ದೆ ಎಂದಿದ್ದ ಮಹಿಳೆ
ನವರತ್ನ ಜ್ಯುವೆಲ್ಲರಿ ಮಾಲೀಕರಿಂದ ಎರಡೂವರೆ ಕೋಟಿ ಮೌಲ್ಯದ 2 ಕೆಜಿ 945 ಗ್ರಾಂ ಚಿನ್ನಾಭರಣ ಪಡೆದಿದ್ದ ಶ್ವೇತಾಗೌಡ ಎಂಬ ಮಹಿಳೆ, ವರ್ತೂರು ಪ್ರಕಾಶ್ ಅವರ ಬೆಂಗಳೂರು ನಿವಾಸದ ವಿಳಾಸ ನೀಡಿ ಚಿನ್ನ ಪಡೆದಿದ್ದಳು. ಈ ಸಂಬಂಧ ವಿಚಾರಣೆಗೆ ಹಾಜರಾಗಲು ವರ್ತೂರು ಪ್ರಕಾಶ್ಗೆ ಪೊಲೀಸರು ನೋಟೀಸ್ ನೀಡಿದ್ದರು. ವಿಚಾರಣೆ ವೇಳೆ ಪಡೆದ ಚಿನ್ನದ ಪೈಕಿ ವರ್ತೂರು ಪ್ರಕಾಶ್ಗೂ ಚಿನ್ನ ನೀಡಿದ್ದೇನೆ ಎಂದು ಶ್ವೇತಾಗೌಡ ಹೇಳಿಕೆ ನೀಡಿದ್ದಳು. ಅಲ್ಲದೇ ದೂರುದಾರ ಸಂಜಯ್ ಭಾಪ್ನಾ ಕೂಡ ಸ್ವತಃ ವರ್ತೂರು ಪ್ರಕಾಶ್ ಶ್ವೇತಗೌಡಳನ್ನು ಪರಿಚಯಿಸಿದ್ರು ಎಂದು ಹೇಳಿಕೆ ನೀಡಿದ್ದರು. ವರ್ತೂರು ಪ್ರಕಾಶ್ ಜ್ಯುವೆಲ್ಲರಿ ಮಾಲೀಕನಿಗೆ ಕರೆ ಮಾಡಿರುವ ಕಾಲ್ ರೆಕಾರ್ಡ್ಸ್, ಜ್ಯುವೆಲ್ಲರಿ ಶಾಪ್ಗೆ ಬಂದು ತೆರಳಿರುವ ಸಿಸಿಟಿವಿ ದೃಶ್ಯಾವಳಿ ಸಮೇತ ಎಸಿಪಿ ಗೀತಾ ಮುಂದೆ ಹೇಳಿಕೆ ದಾಖಲಿಸಿದ್ದರು.
ಏನಿದು ಪ್ರಕರಣ?
ಚಿನ್ನ ಖರೀದಿಸಿ ವಂಚಿಸಿದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದರು. ಗಣ್ಯರ ಹೆಸರ ಹೇಳಿಕೊಂಡು ಚಿನ್ನಾಭರಣ ಖರೀದಿಸಿ ವಂಚನೆ ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕೋಲಾರದ ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರು ಕೇಳಿ ಬಂದಿದೆ. 2.945 ಕೆಜಿ ಚಿನ್ನ ಖರೀದಿಸಿ 2.42 ಕೋಟಿ ವಂಚಿಸಿದ ಆರೋಪದಲ್ಲಿ ಬಾಗಲಗುಂಟೆ ನಿವಾಸಿ ಶ್ವೇತಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಚಿನ್ನ, ಕಾರು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಅವಿನ್ಯೂ ರಸ್ತೆಯ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನಾಭರಣ ಖರೀದಿಸಿ ಹಣ ನೀಡದೆ ವಂಚನೆ ಮಾಡಿರುವುದಾಗಿ ದೂರು ಬಂದ ಹಿನ್ನೆಲೆ ಎಸಿಪಿ ಗೀತಾ ನೇತೃತ್ವದ ತಂಡದಿಂದ ತನಿಖೆ ನಡೆಸಿದ್ದಾರೆ. ಇನ್ನೂ ಈಕೆ ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಎಂದು ಹೇಳಿಕೊಂಡಿದ್ದಾಳೆ. ಚಿನ್ನದ ವ್ಯಾಪಾರಿ ಎಂದು ಹೇಳಿಕೊಂಡು ಸಗಟು ದರದಲ್ಲಿ ಆಭರಣ ಖರೀದಿಸಿ ವಂಚನೆ ಮಾಡಿದ್ದಾಳೆ.
Published by
