Oplus_131072

ಬೆಂಗಳೂರು: ಒಂದೆಡೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರಿಗೆ ದೂರು ಕೊಡೋದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಎಚ್ಚರಿಸಿದ್ದಾರೆ. ಇತ್ತ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಕೌಂಟರ್‌ ನೀಡಲು ಸಿಟಿ ರವಿ (CT Ravi) ಕೂಡ ದೂರು ನೀಡಿದ್ದಾರೆ.

ಹೌದು.. ಬೆಳಗಾವಿ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ ಪ್ರಕರಣದಲ್ಲಿ ಸಿಟಿ ರವಿ ಅವರು ಪೊಲೀಸರಿಂದ ಬಂಧನ ನಂತರ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಸಿಟಿ ರವಿ ಸರ್ಕಾರ ಮತ್ತು ಪೊಲೀಸರ ವಿರುದ್ಧ ಕಿಡಿಕಾರಿದ್ದರು. ಇದೀಗ ಸುವರ್ಣ ಸೌಧದಿಂದ ಬಂಧನವಾಗಿ ಬಿಡುಗಡೆವರೆಗೂ ನಡೆದ ಘಟನೆಯ ಬಗ್ಗೆ ಸಿಟಿ ರವಿ ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಲು ನಿರ್ಧರಿಸಿದ ಬೆನ್ನಲ್ಲೇ ಸಿಟಿ ರವಿ ಕೂಡ ತನ್ನ ಬಂಧನದ ವಿರುದ್ಧ ದೂರು ನೀಡಿದ್ದಾರೆ.

ಪ್ರಕರಣದ ಬಗ್ಗೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅವರು ಸಭಾಪತಿ ಬಸವರಾಜ್ ಹೊರಟ್ಟಿ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಪೊಲೀಸ್ ಮಹಾ ನಿರೀಕ್ಷಕರಿಗೆ ದೂರು ನೀಡಿದ್ದು, 7 ಪುಟಗಳ ವಿಸ್ತಾರವಾದ ದೂರಿನಲ್ಲಿ ಸಿಟಿ ರವಿ ಅವರು, ಸದನದಲ್ಲಿ ನಡೆದ ಘಟನೆ, ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಸಿಟಿ ರವಿ ಅವರು ಘಟನೆಯ ಬಗ್ಗೆ ಸಂಪೂರ್ಣವಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪರಿಷತ್ ಸದಸ್ಯರಾದ ಬೋಸರಾಜ್ ಸೇರಿದಂತೆ ಹಲವರು ತನ್ನ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ಸಿಟಿ ರವಿ ನೀಡಿದ್ದಾರೆ. ಸಭಾಪತಿಗಳಿಗೆ ಕೊಟ್ಟ ದೂರಿನಲ್ಲಿ ಪೊಲೀಸರಿಂದ ಹಕ್ಕು ಚ್ಯುತಿ ಆಗಿರುವ ಬಗ್ಗೆಯೂ ಉಲ್ಲೇಖ ಮಾಡಿದ್ದು, ಜೀವ ಬೆದರಿಕೆ, ಮಾನಹಾನಿಯಾಗಿದೆ ಎಂದು ದೂರು ನೀಡಿದ್ದಾರೆ. ಅಲ್ಲದೇ, ಸಚಿವರ ಬೆಂಬಲಿಗರಿಂದ ಹಲ್ಲೆ ಯತ್ನ ನಡೆದ ಬಗ್ಗೆಯೂ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ದೂರು ನೀಡುವುದಕ್ಕೂ ಮೊದಲು ಕಾನೂನು ಹೋರಾಟದ ಕುರಿತು ತಜ್ಞರ ಜೊತೆ ಸಿ.ಟಿ ರವಿ ಚರ್ಚೆ ನಡೆಸಿದ್ದು, ಆ ಬಳಿಕ ದೂರು ನೀಡಲು ನಿರ್ಧರಿಸಿದ್ದರು. ಈ ಬಗ್ಗೆ ನ್ಯೂಸ್‌ 18 ಜೊತೆ ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಇದರ ಬಗ್ಗೆ ನಾಯಕರೊಂದಿಗೆ ಚರ್ಚೆ ನಡೆಸುತ್ತೇನೆ. ನ್ಯಾಯ ಸಮ್ಮತವಾಗಿದ್ದರೆ ಸಿಐಡಿಗೆ ನೀಡಬೇಕಿಲ್ಲ. ಪೊಲೀಸ್ ಠಾಣೆಯಲ್ಲೇ ನ್ಯಾಯ ಸಿಗುತ್ತೆ ಎಂದು ಸಿಟಿ ರವಿ ಹೇಳಿದ್ದರು.

ಸಿಟಿ ರವಿ ಕೇಸ್ ಸಿಐಡಿ ತನಿಖೆಗೆ!

ವಿಧಾನ ಪರಿಷತ್‌ನಲ್ಲಿ ಅವಾಚ್ಯ ಪದ ಬಳಕೆ ಆರೋಪದ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವರು, ಸಿಟಿ ರವಿ ಪ್ರಕರಣದ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡಲ್ಲ. ಸಿಟಿ ರವಿ ಪ್ರಕರಣವನ್ನ ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ತನಿಖೆ ನಡೆಯುವಾಗ ನಾವು ಹೇಳಿಕೆಗಳನ್ನ ನೀಡುವುದು ಸರಿಯಲ್ಲ ಎಂದು ಹೇಳಿದರು.

ಸಿಟಿ ರವಿ ಪ್ರಕರಣವನ್ನು ಮುಗಿದ ಅಧ್ಯಾಯ ಎಂಬ ಸ್ಪೀಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಸ್ಪೀಕರ್ ಅವರು ತಮ್ಮ‌ ಕೆಲಸ ತಾವು ಮಾಡುತ್ತಾರೆ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲಿಯ ಸಾಧಕ‌ ಬಾಧಕಗಳನ್ನ ನೋಡಿಕೊಂಡು ಹೇಳಿಕೆ ಕೊಟ್ಟಿರಬಹುದು. ಕಾನೂನು ಪ್ರಕ್ರಿಯೆ ನಡೆಯುವಾಗ ಕೆಲವು ವಿಳಂಬವಾಗಬಹುದು. ಆದ್ರೆ ತನಿಖೆಯನ್ನ ಸರಿಯಾಗಿ ಮಾಡಬೇಕಾಗುತ್ತೆ. ಪ್ರಕರಣದ ಸತ್ಯಾಸತ್ಯತೆ ನೋಡಬೇಕಿದೆ. ಸಿಟಿ ರವಿ ಆ ರೀತಿ ಹೇಳಿಲ್ಲ ಅಂತಾರೆ. ಹೆಬ್ಬಾಳ್ಕರ್ ಪಕ್ಕದಲ್ಲಿದ್ದವರು ಆ ಮಾತು ಆಡಿದ್ದಾರೆ ಅಂತ ಹೇಳ್ತಾರೆ. ಈ ಎಲ್ಲ ವಿಚಾರಗಳ ಬಗ್ಗೆ ತನಿಖೆ ಆಗಲೆಂದೇ ಸಿಓಡಿಗೆ ಹಸ್ತತರ ಮಾಡಲಾಗಿದೆ ಎಂದರು.

ಗೃಹ ಇಲಾಖೆಯಲ್ಲಿ ಕೆಲ ಸಚಿವರ ಹಸ್ತಕ್ಷೇಪ ಆರೋಪದ ವಿಚಾರದ ಬಗ್ಗೆಯೂ ಮಾತನಾಡಿದ ಗೃಹ ಸಚಿವರು, ಪೊಲೀಸ್ ಇಲಾಖೆ ಜವಾಬ್ದಾರಿಯುತ ಇಲಾಖೆ. ಸಿಎಂ‌ ಅಥವಾ ಗೃಹ ಸಚಿವರ ಆದೇಶವನ್ನ ಮಾತ್ರ ಪೊಲೀಸರು ಪಾಲನೆ ಮಾಡುತ್ತಾರೆ. ಬೇರೆ ಯಾರೇ ಆದೇಶ ಮಾಡಿದ್ರೂ ಅದನ್ನ ಪಾಲನೆ ಮಾಡಲ್ಲ. ಅವರಿವರು ಆರೋಪ ಮಾಡ್ತಾರೆ ಅಂತಾ ನಾವು ಇಲಾಖೆ ನಡೆಸಲ್ಲ. ಕಾನೂನು ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದರು.

Published by

Leave a Reply

Your email address will not be published. Required fields are marked *