ಬೆಂಗಳೂರು : ಮಾಜಿ ಸಂಸದ ಡಿ.ಕೆ. ಸುರೇಶ್‌ ಅವರ ಸೋದರಿ ಎಂದು ಹೇಳಿಕೊಂಡು ಐಶ್ವರ್ಯಾ ಗೌಡ ಎಂಬ ಮಹಿಳೆ ಚಿನ್ನಾಭರಣ ವ್ಯಾಪಾರಿಗೆ ವಂಚನೆ ನಡೆಸಿರುವ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ನಟ ಧರ್ಮ ಅವರು ಡಿ.ಕೆ. ಸುರೇಶ್‌ ಅವರ ದನಿಯನ್ನು ಅನುಕರಿಸಿ ಫೋನ್‌ ನಲ್ಲಿ ಚಿನ್ನಾಭರಣ ವ್ಯಾಪಾರಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದ್ದು, ಅವರ ವಿರುದ್ದವೂ ಚಂದ್ರಾಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಈ ಕುರಿತು ನಟ ಧರ್ಮ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ವಿರುದ್ದ ಆರೋಪಗಳನ್ನು ಅಲ್ಲಗಳೆದಿದ್ದಾರೆ. ನನಗೆ ಐಶ್ವರ್ಯಾ ಗೌಡ ಪರಿಚಿತರು ನಿಜ. ಅವರ ಮನೆಗೂ ಹೋಗಿದ್ದೇನೆ. ಅಲ್ಲಿ ಡಿ.ಕೆ . ಸುರೇಶ್‌ ಅವರೇ ಇವರು ನನ್ನ ತಂಗಿಯಂತೆ ಎಂದು ಪರಿಚಯಿಸಿದ್ದರು. ಮುಂದೆ ನನ್ನ ಸಿನಿಮಾ ನಿರ್ಮಾಣ ಮಾಡಬಹುದೆಂಬ ಆಸೆಯಿಂದ ಅವರ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದೆ. ಅವರ ಮನೆಯಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳೊಂದಿಗೆ ತೆಗಿಸಿಕೊಂಡಿರುವ ಫೋಟೋಗಳು ಇದ್ದವು. ನಾನು ಯಾವುತ್ತೂ ಚಿನ್ನಾಭರಣ ವ್ಯಾಪಾರಿಗೆ ಕರೆ ಮಾಡಿಲ್ಲ .ಆದರೆ ಅವರೇ ಒಂದು ತಿಂಗಳಿಂದ ನನಗೆ ಕರೆ ಮಾಡಿ, ನಿಮ್ಮನ್ನು ಡಿ.ಕೆ. ಸುರೇಶ್‌ ಎಂದು ನಾವು ನಂಬಿದ್ದೆವು. ನಿಮ್ಮನ್ನು ನಂಬಿ ಸಾಲ ಕೊಟ್ಟಿದ್ದೆವು ಎಂದು ಪೀಡಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

ಐಶ್ವರ್ಯಾ ಗೌಡ , ಚಿನ್ನಾಭರಣ ವ್ಯಾಪಾರಿಯ ಬಳಿ ತೆರಳಿ ಸುಮಾರು 2 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿದ್ದರು. ಬಳಿಕ ನಟ ಧರ್ಮ ಅವರಿಗೆ ಕರೆ ಮಾಡಿ, ಇವರು ಡಿ.ಕೆ. ಸುರೇಶ್‌ ಎಂದು ಚಿನ್ನಾಭರಣ ವ್ಯಾಪಾರಿಯನ್ನು ನಂಬಿಸಿ ಸಾಲ ಪಡೆದಿದ್ದರು ಎನ್ನಲಾಗಿದೆ.

Published by

Leave a Reply

Your email address will not be published. Required fields are marked *