ಮಡಿಕೇರಿ : ರಾಜ್ಯದಲ್ಲೇ ಪ್ರಥಮ ಬಾರಿಗೆ ಯುವಕನೋರ್ವ ತನ್ನ ಮೂಳೆಗಳನ್ನೇ ದಾನ ಮಾಡಿ, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.

ಸೋಮವಾರಪೇಟೆಯ ಜಂಬೂರು ನಿವಾಸಿ ಈಶ್ವರ್(33) ಮೂಳೆಗಳನ್ನು ದಾನ ಮಾಡಿದ ಯುವಕ.

ಈಶ್ವರ್ ಪಿಕ್ ಅಪ್ ಜೀಪ್ ಓಡಿಸಿ ಬರುವ ಬಾಡಿಗೆ ಹಣದಲ್ಲಿ ತಂದೆ ತಾಯಿಯನ್ನು ಸಾಕುತ್ತಿದ್ದ.

ಆದ್ರೆ ಇದೇ ಡಿ. 21ರಂದು ತನ್ನ ಪಿಕ್ ಅಪ್ ಜೀಪ್ ಓಡಿಸಿ ಸಂಜೆ ಮನೆಗೆ ಹಿಂತಿರುಗುವಾಗ ಹಾದಿಯಲ್ಲಿ ಜೀಪ್‌ನ ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾಗಿದೆ. ಅಪಘಾತದಲ್ಲಿ ಈಶ್ವರ್ ತಲೆಗೆ ಗಂಭೀರ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಆದರೆ ವಿವಿಧ ಪರೀಕ್ಷೆ ಮಾಡಿದ ಡಾಕ್ಟರ್, ಈಶ್ವರ್‌ನ ಮೆದುಳು ಡೆಡ್ ಆಗಿದ್ದು ಯಾವುದೇ ಕ್ಷಣದಲ್ಲಿ ಪ್ರಾಣಬಿಡಬಹುದು ಎಂದು ತಿಳಿಸಿದ್ದಾರೆ.

ಆದ್ರೆ ಇದೇ ವೇಳೆ ವೈದ್ಯರೊಬ್ಬರು ಯುವಕನ ಅಂಗಾಂಗ ದಾನ ಮಾಡಬಹುದು ಎಂದು ಯುವಕನ ಕುಟುಂಬದವರಿಗೆ ಸಲಹೆ ಮಾಡಿದ್ದಾರೆ. ಬಳಿಕ ಈಶ್ವರ್‌ನ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ಒಪ್ಪಿಕೊಂಡಿದ್ದಾರೆ. ಆದ್ರೆ ಹೃದಯ ಕಿಡ್ನಿಯಂತಹ ಅಂಗಾಂಗಳು ಆ ಸಂದರ್ಭದಲ್ಲಿ ದಾನ ಮಾಡಲು ಸಾಧ್ಯವಿರಲಿಲ್ಲ. ಹಾಗಾಗಿ ವೈದ್ಯರ ಸಲಹೆಯ ಮೇರೆಗೆ ಈಶ್ವರ್‌ನ ಎರಡು ಕೈ ಹಾಗೂ ಕಾಲುಗಳ ಮೂಳೆಗಳನ್ನ ದಾನ ಮಾಡಲು ಕುಟುಂಬದವರು ಒಪ್ಪಿದ್ದಾರೆ.

ಅದರಂತೆ ಆಸ್ಪತ್ರೆಯಲ್ಲಿ ಈಶ್ವರ್‌ನ ನಾಲ್ಕು ಮೂಳೆಗಳನ್ನ ಪಡೆಯಲಾಗಿದೆ. ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ಒಟ್ಟು ಆರು ಮಕ್ಕಳಿಗೆ ಈ ಯುವಕ ಮೂಳೆಗಳನ್ನ ಬಳಸಲಾಗುತ್ತದೆ. ಈ ರೀತಿ ಮೂಳೆ ದಾನ ಮಾಡಿರುವುದು ರಾಜ್ಯದಲ್ಲೇ ಮೊದಲು ಎನ್ನಲಾಗಿದೆ. ಇನ್ನು ನೋವಿನಲ್ಲೂ ಈಶ್ವರ್‌ನ ಮೂಳೆಗಳನ್ನು ದಾನ ಮಾಡಲು ಒಪ್ಪಿದ ಆತನ ಕುಟುಂಬಸ್ಥರ ಉದಾರ ಮನಸ್ಥಿತಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Published by

Leave a Reply

Your email address will not be published. Required fields are marked *