ಬೆಂಗಳೂರು : ಜಮೀನು ದುರಸ್ತಿ, ಪೋಡಿಗೆ ಎರಡು ನಮೂನೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಮೂಲಕ ಇಡೀ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಸರಳೀಕರಣಗೊಳಿಸಿದೆ. ಇದರಿಂದ, ರಾಜ್ಯದ ರೈತರ ದಶಕಗಳ ಸಂಕಷ್ಟಕ್ಕೆ ಕೊನೆಗೂ ತೆರೆಬಿದ್ದಿದೆ.

ಪೋಡಿ ಮಾಡಲು ನಮೂನೆ 1-5 ಹಾಗೂ 6-10 ಪ್ರಕ್ರಿಯೆಯನ್ನು ಸರಳಗೊಳಿಸಿ ಜಮೀನು ದುರಸ್ತಿ ವೇಗವಾಗಿ ನಿರ್ವಹಿಸಲು ಅನುವು ಮಾಡಿಕೊಡಲಾಗಿದೆ.

ಜಮೀನಿನ ನಮೂನೆ 1-5 ದಾಖಲೆ ಸಿದ್ಧಪಡಿಸುವ, ತಿದ್ದುಪಡಿಗಳನ್ನು ಸರಳೀಕರಣ ಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಬಜೆಟ್​ನಲ್ಲಿ ಘೋಷಿಸಿದ್ದರು.

ಪೋಡಿ ಪ್ರಕ್ರಿಯೆ ಸರಳೀಕರಣಗೊಳಿಸುವ ಸಂಬಂಧ ಇಲಾಖೆ ಅಧಿಕಾರಿಗಳ ಜತೆ ಸರಣಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕೈಗೊಳ್ಳಲು ಮುಂದಾಗಿದ್ದೇವೆ. ನಮೂನೆ 1-5, 6-10 ಸರಳಗೊಳಿಸಿದ್ದು, ಜಮೀನು ದುರಸ್ತಿ ಅಭಿಯಾನ ತಕ್ಷಣ ಆರಂಭಿಸಲು ಸುತ್ತೋಲೆ ಹೊರಡಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

ಏನೆಲ್ಲ ಬದಲಾವಣೆ?: ಒಂದು ಸರ್ವೆ ನಂಬರಿನ ಮಂಜೂರಾತಿದಾರರ ಪೋಡಿ ಹಂತ ಹಂತವಾಗಿ ನಿರ್ವಹಣೆ, ಅನೇಕ ಬಾರಿ ನಮೂನೆ 1-5 ಕಡತ ತಯಾರಿ ಕೊನೆಗೊಳಿಸಲಾಗಿದೆ. ಒಂದು ಸರ್ವೆ ನಂಬರಿನ ಎಲ್ಲ ಮಂಜೂರಾತಿಯ 1-5 ಮತ್ತು ಪೋಡಿ ಕೆಲಸ ಏಕಕಾಲದಲ್ಲಿ ನಿರ್ವಹಿಸಲು ಮಹತ್ವದ ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಜಮೀನು ದುರಸ್ತಿ, ಪೋಡಿಗಾಗಿ ರೈತರು ಕಚೇರಿಗೆ ಅಲೆಯುವ ಬವಣೆ ತಪ್ಪಲಿದ್ದು, ಲಕ್ಷಾಂತರ ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ. ಪ್ರತಿಯೊಂದು ಹಂತದ ಭೌತಿಕ ಪ್ರಕ್ರಿಯೆ ಕೈಬಿಟ್ಟು ತಂತ್ರಜ್ಞಾನದ ಬಲ ನೀಡಲಾಗಿದೆ. ಕಡತ ತಯಾರಿ, ದಾಖಲಾತಿಗಳನ್ನು ಸ್ಕಾಯನ್ ಮಾಡಿ ತಂತ್ರಾಂಶದಲ್ಲಿ ಅಳವಡಿಸಿ ನಿರ್ವಹಿಸಲಾಗುತ್ತಿದೆ. ಒಂದು ಸರ್ವೆ ನಂಬರ್​ಗೆ ಒಮ್ಮೆ ದಾಖಲೆ ಅಳವಡಿಸಿದ ನಂತರ ಕಾಯಂ ಆಗಿ ಲಭ್ಯವಾಗಲಿದ್ದು, ನಕಲು ಅಥವಾ ತಿದ್ದಲು ಸಾಧ್ಯವಿಲ್ಲ. ಯಾವುದೇ ಒಂದು ದಾಖಲಾತಿ ಲಭ್ಯವಿಲ್ಲದಿದ್ದರೆ ಆ ಕಡತವನ್ನು ಗೈರುವಿಲೇ ಕಮಿಟಿ ಎದುರು ಮಂಡಿಸಲಾಗಿತ್ತು. ಈಗ ಕನಿಷ್ಠ ಮೂರು ದಾಖಲಾತಿಗಳು ಲಭ್ಯವಿದ್ದಲ್ಲಿ ತಹಸೀಲ್ದಾರರು ನೈಜತೆ ಪರಿಶೀಲಿಸಿ ಪೋಡಿ ಕ್ರಮವಹಿಸಲು ಆದೇಶಿಸಬಹುದಾಗಿದೆ.

ತಹಸೀಲ್ದಾರ್​ಗೆ ಅಧಿಕಾರ: ನಮೂನೆ 1-5ನ್ನು ತಹಸೀಲ್ದಾರರು ತಯಾರಿಸಿದ ನಂತರ ಉಪ ವಿಭಾಗಾಧಿಕಾರಿ ಹಾಗೂ ಭೂದಾಖಲೆಗಳ ಉಪ ನಿರ್ದೇಶಕರು ಪರಿಶೀಲಿಸಿ ಅನುಮೋದಿಸುತ್ತಿದ್ದರು. ಈ ಹಂತವನ್ನು ಕೈಬಿಟ್ಟು ತಹಸೀಲ್ದಾರರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಮಂಜೂರಾತಿ ನೈಜತೆಯನ್ನು ಆಯಾ ತಹಸೀಲ್ದಾರ್ ಖಚಿತಪಡಿಸಿಕೊಂಡ ನಂತರ ನೇರವಾಗಿ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪೋಡಿ ಕ್ರಮವಹಿಸಲು ಸೂಚಿಸಬಹುದು. ಕೆಲವು ಪ್ರಕರಣಗಳಲ್ಲಿ ನಮೂನೆ 6-10 ತುಂಬುವ ಪ್ರಕ್ರಿಯೆ ಕೈಬಿಡಲಾಗಿದೆ. ಮಂಜೂರಾತಿ ನಕ್ಷೆಯಲ್ಲಿ ಗುರುತಿಸಿರುವ ರೂಢಿ ದಾರಿಯನ್ನು ದುರಸ್ತಿ ದಾಖಲೆಯಲ್ಲಿ ಪ್ರತ್ಯೇಕ ದಾರಿ ಎಂದೇ ಗುರುತಿಸಿ ಕಾಯಂಗೊಳಿಸಬೇಕು. ಅಲ್ಲದೆ ಈ ಜಾಗವನ್ನು ಯಾರ ವಿಸ್ತೀರ್ಣದಲ್ಲೂ ಸೇರಿಸಬಾರದು ಎಂದು ತಿಳಿಸಲಾಗಿದೆ.

ಸಂಪೂರ್ಣ ಆನ್​ಲೈನ್: ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕ, ಶಿರಸ್ತೇದಾರ ಹಾಗೂ ತಹಸೀಲ್ದಾರರು ನಮೂನೆ 1 ರಿಂದ 5ರ ಮಾಹಿತಿ ಭರ್ತಿ ಮಾಡಿ ಡಿಜಿಟಲ್ ಸಹಿ ಮಾಡುವಂತಹ ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಆ ಮೂಲಕ ದರಖಾಸ್ತು ಪೋಡಿ ಪ್ರಕ್ರಿಯೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಲಾಗಿದೆ. ಇನ್ನು ಮುಂದೆ ದರಖಾಸ್ತು ಪೋಡಿ ಪ್ರಕರಣಗಳನ್ನು ಸಂಪೂರ್ಣವಾಗಿ ಆನ್​ಲೈನ್ ವ್ಯವಸ್ಥೆಯ ಮೋಜಿಣಿ ತಂತ್ರಾಂಶದಲ್ಲಿ ನಿರ್ವಹಿಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಜತೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಏಕವ್ಯಕ್ತಿ ಪ್ರಕರಣಗಳಲ್ಲಿನ ಪೋಡಿ ಆದೇಶವು ಆರು ತಿಂಗಳ ಅವಧಿಯವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಏನಿದು ದರಖಾಸ್ತು ಪೋಡಿ?: ದರಖಾಸ್ತು ಪೋಡಿ ಎಂದರೆ, ಸರ್ಕಾರ ಮಂಜೂರು ಮಾಡಿದ ಜಮೀನಿನ ನಿರ್ದಿಷ್ಟ ಸರ್ವೆ ನಂಬರ್, ವಿಸ್ತೀರ್ಣ ಹಾಗೂ ಸೀಮೆ (ಚೆಕ್​ಬಂದಿ) ಗೊತ್ತುಪಡಿಸಿ, ಆಯಾ ರೈತನಿಗೆ ಅಧಿಕೃತವಾಗಿ ಜಮೀನಿನ ಮಾಲೀಕತ್ವ ನೀಡುವುದು. ಇದರಿಂದ ಜಮೀನು ಒತ್ತುವರಿ ಸಮಸ್ಯೆ ಬಗೆಹರಿಯಲಿದೆ. ನೈಜವಾಗಿ ಮಂಜೂರಾದಷ್ಟೇ ಜಮೀನು ರೈತನಿಗೆ ಲಭಿಸುತ್ತದೆ. ಹಾಗೆಯೇ ಸರ್ಕಾರಿ ಜಮೀನು ಲಭ್ಯತೆಗಿಂತ ಹೆಚ್ಚುವರಿ ಮಂಜೂರಾತಿಯಿಂದ ಉಂಟಾಗಿರುವ ಗೊಂದಲವೂ ಇತ್ಯರ್ಥವಾಗಲಿದೆ.

ರೈತರಿಗೇನು ಪ್ರಯೋಜನ?

ತಂತ್ರಾಂಶ ಬಳಕೆ ಹಾಗೂ ಎಲ್ಲ ಹಂತದಲ್ಲಿ ಕಾಲಮಿತಿ ನಿಗದಿ ಇದರಿಂದ ದುರಸ್ತಿ ಪ್ರಕ್ರಿಯೆ ಪಾರದರ್ಶಕ, ತ್ವರಿತವಾಗಿ ಪೂರ್ಣಕಾಗದ ರಹಿತ ಪ್ರಕ್ರಿಯೆಯಿಂದಾಗಿ ಕಚೇರಿ ಅಲೆದಾಟ ಇರಲ್ಲ ನಮೂನೆ 1-5, 6-10 ಪ್ರಗತಿ ಮಾಹಿತಿ ಡ್ಯಾಶ್​ಬೋರ್ಡಲ್ಲಿ ಲಭ್ಯ ರಾಜ್ಯಮಟ್ಟದಲ್ಲಿ ಮನವಿ ಪರಿಶೀಲನೆಗೆ ವೇಗದ ಸ್ಪರ್ಶ ಜಾಲತಾಣದಲ್ಲಿ ವೀಕ್ಷಿಸಲು ಜನಸಾಮಾನ್ಯರಿಗೆ ಅವಕಾಶ ಮುಂದಿನ ದಿನಗಳಲ್ಲಿ ಅಳತೆಯ ಕಾರ್ಯ ರೋವರ್ಸ್ ಬಳಕೆಆ ಮೂಲಕ ಮೂಲಕ ಡಿಜಿಟಲ್ ಸರ್ವೆ ಮಾಡಲು ಉದ್ದೇಶ ಇದರಿಂದ ನಿಖರತೆಯ ಅಳತೆಗೆ ತಗಲುವ ಸಮಯ ಕಡಿತ

Published by

twelvenewz.com

Leave a Reply

Your email address will not be published. Required fields are marked *