
ಡಿಸೆಂಬರ್ 11: ಬಂಗಾಳಕೊಲ್ಲಿ ಹಾಗೂ ಹಿಂದೂ ಮಹಾಸಾಗರದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ಮಂಗಳವಾರ ಮತ್ತು ಬುಧವಾರದ ನಡುವೆ ಮತ್ತಷ್ಟು ತೀವ್ರಗೊಂಡಿದೆ. ವಾಯುಭಾರ ಕುಸಿತ ಈಗ ಚಂಡಮಾರುತ ಪರಿಚಲನೆಯಯಾಗಿ ಪರಿವರ್ತನೆಗೊಂಡಿದೆ. ಇದು ಇನ್ನೂ ತೀವ್ರಗೊಂಡರೆ ಸ್ಪಷ್ಟ ಚಂಡಮಾರುತವಾಗಿ ಅಬ್ಬರಿಸುವ ಸಾಧ್ಯತೆ ಇದೆ.
ಸದ್ಯ ಈ ಹವಾಮಾನ ವೈಪರಿತ್ಯದ ಬಿರುಗಾಳಿಯು ಕರಾವಳಿಯತ್ತ ಚಲಿಸುತ್ತಿದೆ. ವಿವಿಧ ರಾಜ್ಯಗಳಿಗೆ ಭಾರೀ ಮಳೆಯ ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಐಎಂಡಿ ಹವಾಮಾನ ಮುನ್ಸೂಚನೆ ಪ್ರಕಾರ, ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ಪೂರ್ವ ಸಮಭಾಜಕ ಹಿಂದೂ ಮಹಾಸಾಗರದ ಮೇಲಿನ ಕಡಿಮೆ ಒತ್ತಡದ ಪ್ರದೇಶವು ತೀವ್ರಗೊಂಡಿದೆ. ಕಳೆದ ಮೂರು ದಿನಗಳಿಂದ ವಾಯುಭಾರ ಕುಸಿತವಾಗಿ ಸಮುದ್ರದ ಮೇಲ್ಮೈನಲ್ಲಿ ಒಂದು ಕಡೆ ಕೇಂದ್ರಿಕೃತವಾಗಿದ್ದ ಚಂಡಮಾರುತ ಪರಿಚಲನೆಯು ಇದೀಗ ಭೂಮಿಯತ್ತ ಚಲಿಸಲು ಆರಂಭಿಸಿದೆ.
ಡಿಸೆಂಬರ್ 10 ರಂದು ಸ್ಪಷ್ಟ ವಾಯುಭಾರ ಕುಸಿತವಾಗಿತ್ತು. ಇಂದು ಬುಧವಾರ ಡಿಸೆಂಬರ್ 11 ರಂದು ಅದು ಚಂಡಮಾರುತ ಪರಿಚಲನೆಯಾಗಿ ಬದಲಾಗಿದೆ. ಆಗ್ನೇಯ ಬಂಗಾಳಕೊಲ್ಲಿಯ ಭಾಗದಿಂದ ಬಿರುಗಾಳಿ ರೂಪದಲ್ಲಿರುವ ಸೈಕ್ಲೋನಿಕ್ ಪರಿಚಲನೆ ಮಧ್ಯ-ಟ್ರೋಪೋಸ್ಪಿರಿಕ್ ಮಟ್ಟಗಳವರೆಗೆ ವಿಸ್ತರಿಸುವ ಸಾಧ್ಯತೆ ಇದೆ.
ಕರಾವಳಿಗೆ ಭೀಕರ ಮಳೆ, ಬಿರುಗಾಳಿ ಸಂಭವ
ಮುಂದಿನ 24 ಗಂಟೆಗಳಲ್ಲಿ ಈ ವ್ಯವಸ್ಥೆಯು ಪಶ್ಚಿಮ-ವಾಯುವ್ಯದ ಕಡೆಗೆ ಅಂದರೆ ಶ್ರೀಲಂಕಾ ಮತ್ತು ತಮಿಳುನಾಡು ಕರಾವಳಿಯತ್ತ ಚಲಿಸಲಿದೆ. ಈಗಾಗಲೇ ಈ ಭಾಗದಲ್ಲಿ ಭೀಕರ ಗಾಳಿ ಬೀಸುತ್ತಿದ್ದು, ಚಳಿ ಅತೀಯಾದ ಮಳೆಯ ವಾತಾವರಣ ನಿರ್ಮಾಣವಾಗಿದೆ.
ಚೆನ್ನೈ, ಕೇರಳ, ತಮಿಳುನಾಡು ರಾಜ್ಯಗಳ ಕರಾವಳಿ ಜಿಲ್ಲೆಗಳು ಅತೀವ ಮಳೆ ಎದುರಿಸಲಿವೆ. ಫೆಂಗಲ್ ಚಂಡಮಾರುತ ಬೆನ್ನಲ್ಲೆ ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿಯಲ್ಲಿ ಎರಡು ಕಡೆಗಳಲ್ಲಿ ಪ್ರತ್ಯೇಕ ವಾಯುಭಾರ ಕುಸಿತಗಳು ಸಂಭವಿಸಿವೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ ಎಂದು ವರದಿ ಆಗಿದೆ.

ಭಾರೀ ಮಳೆ, ಪ್ರವಾಹ ಆತಂಕದಲ್ಲಿ ಕರಾವಳಿ ನಿವಾಸಿಗಳು
ಡಾನಾ, ಫೆಂಗಲ್ ಚಂಡಮಾರುತ ಹಾಗೂ ಬಳಿಕ ಮತ್ತೊಂದು ಚಂಡಮಾರುತದ ಅಬ್ಬರ, ಮಹಾಮಳೆ, ಪ್ರವಾಹದ ನಿರೀಕ್ಷೆ ಇದೆ. ಒಂದು ವೇಳೆ ಕರಾವಳಿಗೆ ಅಪ್ಪಳಿಸುವ ಮೊದಲೇ ದುರ್ಬಲಗೊಂಡರೆ, ಸಾಧಾರಣದಿಂದ ಭಾರೀ ಮಳೆ ಬರಬಹುದು. ಸದ್ಯ ಕರಾವಳಿ ಭಾಗದಲ್ಲಿ ಕ್ರಮೇಣ ಗಾಳಿ ವೇಗ, ಶೀತ ಹಾಗೂ ಮಳೆ ವಾತಾವರಣ ಉಂಟಾಗಿದೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ಭೀಕರ ಮಳೆಯ ಆತಂಕದಲ್ಲಿ ಕರಾವಳಿ ಜನರು ದಿನ ದೂಡುತ್ತಿದ್ದಾರೆ.
ಕರ್ನಾಟಕಕ್ಕೆ ಏನಿದೆ ಮುನ್ಸೂಚನೆ
ಈ ಚಂಡಮಾರುತವು ಮುಂದಿನ 48 ಗಂಟೆಗಳಲ್ಲಿ ತೀವ್ರಗೊಳ್ಳುವ ನಿರೀಕ್ಷೆ ಇದೆ. ಇದರಿಂದ ಕೇರಳ, ಶ್ರೀಲಂಕ, ಚೆನ್ನೈಗೆ ಮಾತ್ರವಲ್ಲದೇ, ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಮೇಲೂ ಪ್ರಭಾವ ಬೀರಲಿದೆ. ಡಿಸೆಂಬರ್ 13 ಮತ್ತು 14ರಂದು ಸುಮಾರು 12 ಕ್ಕೂ ಹೆಚ್ಚು ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಬರಲಿದ್ದು, ಐಎಂಡಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
Published by
