
ತಮಿಳುನಾಡಿನ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಜೋರು ಮಳೆ ಬರುತ್ತಿದ್ದು ಬೆಂಗಳೂರು ಹಾಗೂ ಸುತ್ತುಮುತ್ತಲಿನ ಜಿಲ್ಲೆಗಳಲ್ಲೂ ಮುಂದಿನ ಐದು ದಿನ ಮಳೆ ಬರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.
ವಾಸ್ತವವಾಗಿ, ಸಕಾಲದಲ್ಲಿ ಉತ್ತಮ ಮಳೆಯಾದರೆ ಉತ್ತಮ ಬೆಳೆ ಬೆಳೆಯಬಹುದು.
ಆದರೆ ಬೆಂಗಳೂರಿನಲ್ಲಿ ಮಳೆ ಬಂದರೆ ಟ್ರಾಫಿಕ್ ಜಾಮ್ ನಿಂದ ಹಿಡಿದು ಒಂದಿಲ್ಲೊಂದು ಸಮಸ್ಯೆ ಶುರುವಾಗುತ್ತೆ. ಇರಲಿ, ಈ ವೀಕೆಂಡಿಗೆ ಮಳೆರಾಯ ಬೆಂಗಳೂರಿಗೆ ಎಂಟ್ರಿ ಕೊಡಲಿದ್ದಾನೆ. ಹಾಗಾಗಿ ಇದು ವೀಕೆಂಡ್ ನಲ್ಲಿ ಸಿಟಿ ಸುತ್ತಬೇಕು ಎನ್ನುವವರಿಗೆ ಕಿರಿಕಿರಿ ಉಂಟು ಮಾಡುವ ಸುದ್ದಿಯಾಗಿದೆ. ಈಗಾಗಲೇ ತಮಿಳುನಾಡಿನಲ್ಲಿ ಜೋರು ಮಳೆ ಬರುತ್ತಿದ್ದು ಬೆಂಗಳೂರು ಹಾಗು ಸುತ್ತುಮುತ್ತಲಿನ ಜಿಲ್ಲೆಗಳಲ್ಲೂ ಮುಂದಿನ ಐದು ದಿನ ಮಳೆ ಬರಬಹುದು ಎಂದಿರುವ ಭಾರತೀಯ ಹವಾಮಾನ ಇಲಾಖೆ ರಾಜ್ಯದ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿ ಮಾಡಿದೆ.
ಹವಾಮಾನ ಬ್ಯೂರೋ ಪ್ರಕಾರ, ಆಗ್ನೇಯ ಬಂಗಾಳ ಕೊಲ್ಲಿ ಕಡೆಯಿಂದ ಮೋಡಗಳು ಚಲಿಸುತ್ತಿದ್ದು ಡಿಸೆಂಬರ್ 13ರಂದು ತಮಿಳುನಾಡನ್ನು ತಲುಪುತ್ತವೆ. ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಲಘುವಾಗಿ ಮಳೆಯಾಗುವ ಸಾಧ್ಯತೆಯಿದೆ. ಹೆಚ್ಚುವರಿಯಾಗಿ, ತಮಿಳುನಾಡಿನ ರಾಣಿಪೇಟ್, ತಿರುವಣ್ಣಾಮಲೈ, ಕಲ್ಲಕುರಿಚಿ, ಅರಿಯಲೂರ್, ಪೆರಂಬಲೂರ್, ತಿರುಚಿರಾಪಳ್ಳಿ, ಕರೂರ್, ದಿಂಡಿಗಲ್, ತಿರುಪ್ಪೂರ್ ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮುಂದುವರೆದು ಬೆಂಗಳೂರು ಹಾಗು ಬೆಂಗಳೂರಿನ ಸುತ್ತಲಿನ ಜಿಲ್ಲೆಗಳು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಕಾಸರಗೋಡು, ಸಕಲೇಶಪುರ, ಹಾಸನ, ಮಡಿಕೇರಿ, ಮೈಸೂರು, ಕೋಲಾರ ಜಿಲ್ಲೆಗಳಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಇಲ್ಲೆಲ್ಲಾ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಬೆಂಗಳೂರಿನಲ್ಲಿ ಗುರುವಾರ ಕೂಡ ಸ್ವಲ್ಪ ಮಳೆಯಾಗಿದ್ದು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು. ಕೆಲ ಪ್ರದೇಶಗಳು ಜಲಾವೃತಗೊಂಡಿದ್ದವು. ಇಂದು ಅಂದರೆ ಶುಕ್ರವಾರ ಮತ್ತೊಂದು ಸುತ್ತಿನ ಮಳೆಯಾದರೆ ಮತ್ತಷ್ಟು ಸಮಸ್ಯೆಯಾಗಬಹುದು ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ಜೋರು ಮಳೆಯಾದರಂತೂ ಸಮಸ್ಯೆ ಗ್ಯಾರಂಟಿ.
ಬೆಂಗಳೂರಿನಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನವು 18 ಡಿಗ್ರಿ ಸೆಲ್ಸಿಯಸ್ ಮತ್ತು 25 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ. ನಗರದಲ್ಲಿ ಬುಧವಾರದ ಮಟ್ಟಕ್ಕಿಂತ ಹೆಚ್ಚಿನ ಆರ್ದ್ರತೆಯ ಮಟ್ಟವು ಶೇಕಡಾ 86 ರಷ್ಟು ದಾಖಲಾಗಿದೆ. ಈಶಾನ್ಯದಿಂದ ಗಂಟೆಗೆ 16 ಕಿಮೀ ವೇಗದಲ್ಲಿ ಬೀಸುವ ಗಾಳಿ ಮತ್ತು 76 ರ ವಾಯು ಗುಣಮಟ್ಟ ಸೂಚ್ಯಂಕ (AQI) ಮಧ್ಯಮ ಗಾಳಿಯ ಗುಣಮಟ್ಟವನ್ನು ಸೂಚಿಸುತ್ತದೆ ಎಂದು ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ,ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ, ದಕ್ಷಿಣದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆ ನೀಡಿದೆ.
Published by
✍️ಪ್ರಶಾಂತ್ ಎಚ್ ವಿ
