ಮಾಜಿ ಸಚಿವ ಹಾಗೂ ಬಿಜೆಪಿ ನಾಯಕನಿಗೆ ಇದೀಗ ಬಂಧನದ ಭೀತಿ ಶುರುವಾಗಿದೆ. ರಾಜಕಾರಣಿಯ ಆಪ್ತೆ ಮಾಡಿರುವ ಕೃತ್ಯವು ಇದೀಗ ಅವರಿಗೂ ಮುಳುವಾಗಿದೆ ಎಂದು ಹೇಳಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಮಹಿಳೆಯಿಂದಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರಿಗೆ ಸದ್ಯ ಬಂಧನದ ಭೀತಿ ಶುರುವಾಗಿದೆ.
ಶ್ವೇತಾಗೌಡ ಎಂಬಾಕೆ ಚಿನ್ನದ ವ್ಯಾಪಾರಿಗೆ ಕೋಟ್ಯಂತರ ರೂಪಾಯಿ ಹಣ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕೇಸ್ ಸಂಬಂಧ ಶ್ವೇತಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವಂಚನೆ ಪ್ರಕರಣದಲ್ಲಿ ನನ್ನೊಂದಿಗೆ ವರ್ತೂರು ಪ್ರಕಾಶ್ ಅವರು ಕೂಡ ಶಾಮೀಲಾಗಿದ್ದಾರೆ ಎಂದು ವಿಚಾರಣೆ ವೇಳೆ ಮಾಹಿತಿ ನೀಡಿದ್ದು, ಇದರಿಂದ ವರ್ತೂರು ಸಂತೋಷ್ ಅವರಿಗೂ ಇದೀಗ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಆರೋಪಿ ಶ್ವೇತಾ ನೀಡಿದ ಮಾಹಿತಿ ಮೇರೆಗೆ ಪೊಲೀಸರು ವಿಚಾರಣೆಗೆ ಬರುವಂತೆ ನೋಟಿಸ್ ಕೂಡ ನೀಡಿದ್ದರು. ಆದರೆ, ನಿನ್ನೆ ವರ್ತೂರು ಪ್ರಕಾಶ್ ವಿಚಾರಣೆಗೆ ಹಾಜರಾಗಿಲ್ಲ. ಹಾಗಾಗಿ ಪೊಲೀಸರು ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಇಂದು ವರ್ತೂರು ಪ್ರಕಾಶ್ ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪ್ರಕಾಶ್ ಅವರು ವಿಚಾರಣೆಗೆ ಹಾಜರಾಗದೆ ಇದ್ದರೆ, ಯಾವ ಕ್ಷಣದಲ್ಲಾದರೂ ಬಂಧಿಸುವ ಸಾಧ್ಯತೆಯೂ ಇದೆ.
ಏನಿದು ಗುಲಾಬ್ ಜಾಮೂನ್ ಕಥೆ?
ವರ್ತೂರು ಪ್ರಕಾಶ್ ಅವರಿಗೆ ಶ್ವೇತಾ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದರು. ಪ್ರಕಾಶ್ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಮಾಡಿಕೊಂಡು ಪರಿಚಯವಾಗಿದ್ದ ಶ್ವೇತಾ, ನಂಬರ್ ಪಡೆದು ಇಬ್ಬರೂ ಫೋನ್‌ನಲ್ಲಿ ಮಾತುಕತೆ ಶುರು ಮಾಡಿದ್ದರು. ವಾಟ್ಸಪ್‌ನಲ್ಲೂ ಫುಲ್ ಚಾಟಿಂಗ್ ನಡೆದಿದ್ದು, ವರ್ತೂರು ಪ್ರಕಾಶ್ ಅವರ ಹೆಸರನ್ನು ಶ್ವೇತಾ ತಮ್ಮ ಫೋನ್‌ನಲ್ಲಿ “ಗುಲಾಬ್ ಜಾಮೂನ್” ಎಂದು ಸೇವ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿದ್ದ ಆಭರಣ ಮಾಲೀಕರನ್ನು ಶ್ವೇತಾ ಅವರಿಗೆ ವರ್ತೂರು ಪ್ರಕಾಶ್ ಅವರೇ ಪರಿಚಯ ಮಾಡಿಕೊಟ್ಟಿದ್ದರು. ಇವರಿಬ್ಬರು ಜೊತೆಗೂಡಿ ಚಿನ್ನದ ವ್ಯವಹಾರ ನಡೆಸಿದ್ದರು. ಕೋಟ್ಯಂತರ ರೂಪಾಯಿ ಹಣ ವಂಚನೆ ನಡೆದಿದ್ದು, ಇದರಲ್ಲಿ ಇಬ್ಬರೂ ಭಾಗಿದಾರರು ಎಂದು ಶ್ವೇತಾ ಪೊಲೀಸರ ಎದುರು ಹೇಳಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಪೊಲೀಸರಿಗೆ ಸಾಕ್ಷಿಗಳು ಸಿಕ್ಕಿವೆ. ಶ್ವೇತಾ ಹಾಗೂ ಪ್ರಕಾಶ್ ಅವರು ಒಟ್ಟಾಗಿ ಅಂಗಡಿಗೆ ಭೇಟಿ ನೀಡಿರುವ ಫೋಟೋ ಹಾಗೂ ಇನ್ನಿತರ ಸಾಕ್ಷಿಗಳು ಲಭ್ಯವಾಗಿವೆ ಎಂದು ಹೇಳಲಾಗಿದೆ.
ಶ್ವೇತಾ ಹೇಳಿಕೆ ಹಾಗೂ ಸಿಕ್ಕಿರುವ ಸಾಕ್ಷಿಗಳಿಂದಾಗಿ ವರ್ತೂರು ಪ್ರಕಾಶ್ ಅವರಿಗೆ ಸಂಕಷ್ಟ ಎದುರಾಗಿದೆ. ಇಬ್ಬರೂ ಒಟ್ಟಿಗೆ ಸುತ್ತಾಡಿರುವುದು, ಚಾಮುಂಡಿ ಬೆಟ್ಟಕ್ಕೂ ಹೋಗಿದ್ದಾರೆ. ತಿರುಪತಿಗೆ ಹೋಗಲು ಕೂಡ ಟಿಕೆಟ್ ಸಹ ಬುಕ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶ್ವೇತಾ ಮೊಬೈಲ್‌ನಲ್ಲಿ ಶಾಕಿಂಗ್ ಮಾಹಿತಿಗಳು ಸಿಕ್ಕಿವೆ. ಹಾಗಾಗಿ ಮೇಲ್ನೋಟಕ್ಕೆ ವರ್ತೂರು ಪ್ರಕಾಶ್ ಅವರು ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷಿಗಳು ಪೂರಕವಾಗಿವೆ ಎಂದು ಹೇಳಲಾಗುತ್ತಿದೆ.
Published by
