ಬೆಂಗಳೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಅಶ್ಲೀಲ ಪದಪ್ರಯೋಗ ಮಾಡಿದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರನ್ನು ಬಂಧಿಸಲಾಗಿದೆ. ಈ ಅವಾಚ್ಯ ಶಬ್ದದ ಬಗ್ಗೆ ಸಿ.ಟಿ. ರವಿಯ ಪರ ವಿರೋಧ ಕಾಂಗ್ರೆಸ್-ಬಿಜೆಪಿ ಕೆಸರೆರೆಚಾಟ ಪ್ರಾರಂಭವಾಗಿರುವ ಬೆನ್ನಲ್ಲೇ ಸಿ.ಟಿ.
ರವಿ ಕಳೆದ ಅಧಿವೇಶನದಲ್ಲಿ ನುಡಿದಿದ್ದ ನುಡಿಮುತ್ತೊಂದು ಮತ್ತೆ ಈಗ ವೈರಲ್ ಆಗಿದೆ.
ಕೆಲವರು ಅಧಿಕಾರ ಇದ್ದಾಗ ಮಾತ್ರ ಬರುತ್ತಾರೆ. ಅಧಿಕಾರ ಕಳೆದುಕೊಂಡ ಮೇಲೆ ಅಧಿಕಾರ ಇದ್ದ ಕಡೆ ಹೋಗುತ್ತಾರೆ. ನಿತ್ಯ ಸುಮಂಗಲಿಯರಂತೆ ಅವರು ಅಧಿಕಾರ ಇದ್ದ ಕಡೆ ಇರುತ್ತಾರೆ ಎಂದು ಸಿ.ಟಿ. ರವಿ ಹೇಳಿದ್ದರು. ನಿತ್ಯ ಸುಮಂಗಲಿ ಎಂಬ ಪದವನ್ನು ಒತ್ತಿ ಒತ್ತಿ ಹೇಳಿದಾಗ ಸದನದಲ್ಲಿ ಕೋಲಾಹಲ ಪ್ರಾರಂಭವಾಗಿತ್ತು. ಲಕ್ಷ್ಮೀ ಹೆಬ್ಬಾಳ್ಕರ್ ಇದಕ್ಕೆ ಪ್ರತಿಕ್ರಿಯಿಸಿ, ಇನ್ನೂ ನೀವು ಹೆಣ್ಣುಮಕ್ಕಳ ಬಗ್ಗೆ ಅಗೌರವ ಇಟ್ಟುಕೊಂಡಿದ್ದೀರಿ. ಮನುಸ್ಮೃತಿ ಸಂಸ್ಕೃತಿಯನ್ನು ಬಿಟ್ಟಿಲ್ಲವೇ ಎಂದು ತಿರುಗೇಟು ನೀಡಿದ್ದರು.
ಈ ಬಗ್ಗೆ ಕೆರಳಿ ಕೆಂಡವಾಗಿದ್ದ ಮಾಜಿ ಸಚಿವೆ ಉಮಾಶ್ರೀ, ಪದೇ ಪದೇ ಹೆಣ್ಣಿನ ಬಗ್ಗೆ ಯಾಕೆ ಆ ಪದವನ್ನು ಬಳಸುತ್ತೀರಿ ಎಂದು ಹರಿಹಾಯ್ದಿದ್ದರು. ಜೊತೆಗೆ, ಪುರುಷರ ಬಗ್ಗೆ ಹೇಳುವಂತಹ ಯಾವುದೇ ಪದವಿಲ್ಲವೇ ಎಂದು ಕುಟುಕಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಿ.ಟಿ. ರವಿ, ಅಕ್ಕಾ ಅದು ಹಳೆ ಪದ. ಈಗಲೂ ಚಾಲ್ತಿಯಲ್ಲಿದೆ ಎಂದು ಸಬೂಬು ನೀಡಲು ಯತ್ನಿಸಿದಾಗ, ಹಳೆಯ ಪದ ಹಳೆಯ ಕಾಲಕ್ಕೇ ಹೋಯಿತು. ಈಗಿನ ಕಾಲದಲ್ಲಿ ಅವೆಲ್ಲಾ ನಡೆಯೋಲ್ಲ ಎಂದು ಉಮಾಶ್ರೀ ಖಾರವಾಗಿ ನುಡಿದ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ.
Published by
