
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತು ಫೆಂಗಲ್ ಚಂಡಮಾರುತದಿಂದ ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 2 ಮತ್ತು 3 ರಂದು 35 ರಿಂದ 85 ಮಿಮೀ ಮಳೆಯಾಗುವ ನಿರೀಕ್ಷೆಯಿದೆ. ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು, ಡಿಸೆಂಬರ್ 01: ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಫೆಂಗಲ್ ಚಂಡಮಾರುತದ (Fengal Cyclone) ಎಫೆಕ್ಟ್ ಕರ್ನಾಟಕಕ್ಕೂ ತಟ್ಟಿದೆ. ಮುಂದಿನ 48 ಗಂಟೆಗಳು ರಾಜ್ಯದ ಮೇಲೆ ಫೆಂಗಲ್ ಚಂಡಮಾರುತ ಪರಿಣಾಮ ಬೀರಲಿದೆ. ಅದರಲ್ಲೂ ಡಿ. 2 ಮತ್ತು 3ರಂದು ಹೆಚ್ಚಿನ ಎಫೆಕ್ಟ್ ಇರಲಿದ್ದು, 35 ರಿಂದ 85 ಮಿಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಸದ್ಯ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದೆ. ಇನ್ನು ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿಯಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಸಿ.ಎಸ್ ಪಾಟೀಲ್ ಹೇಳಿದ್ದಿಷ್ಟು
ಹವಾಮಾನ ಇಲಾಖೆ ತಜ್ಞ ಸಿ.ಎಸ್ ಪಾಟೀಲ್ ಪ್ರತಿಕ್ರಿಯಿಸಿದ್ದು, ಇಂದು ದಕ್ಷಿಣ ಒಳನಾಡಿನಲ್ಲಿ ಹಗುರ ಮಳೆಯಾಗಿದೆ. ಪ್ರಮುಖವಾಗಿ ಕೋಲಾರ್, ಚಾಮರಾಜನಗರ ತಲಾ 1 ಸೆ.ಮೀ ಮಳೆಯಾಗಿದೆ. ಕಳೆದ ನಾಲ್ಕೈದು ದಿನದಿಂದ ಬಂಗಾಲ ಉಪಸಾಗರದಲ್ಲಿ ವಾಯುಭಾರ ಕುಸಿತವಾಗಿದೆ. ಪರಿಣಾಮ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದೆ. ಹಗಲಿನ ಹೊತ್ತು ಸೂರ್ಯ ಪ್ರಕಾಶ ಕಡಿಮೆ ಆಗಿದೆ. ಈ ಹಿನ್ನಲೆ ದಕ್ಷಿಣ ಒಳನಾಡಿನ ಗರಿಷ್ಠ ತಾಪಮಾನದಲ್ಲಿ ಇಳಿಕೆ ಆಗಿದೆ ಎಂದು ತಿಳಿಸಿದ್ದಾರೆ.
ಈಗಿರುವ ಹವಾಮಾನ ಸ್ಥಿತಿ ಫೆಂಗಾಲ್ ಚಂಡಮಾರುತ. ಕಡಲೂರು ಹಾಗೂ ಪಾಂಡಿಚೇರಿ ಹತ್ತಿರ ಇದೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್ 3ರ ವರೆಗೆ, ಹಗುರದಿಂದ ಸಾಧಾರಣವಾಗಿ ವ್ಯಾಪಕ ಮಳೆ ಸಾಧ್ಯತೆ ಇದೆ. ಉತ್ತರ ಒಳನಾಡಿನ ಹಲವೆಡೆ ಅಲ್ಲಲ್ಲಿ ಮಳೆ ಆಗಲಿದೆ ಎಂದಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಭಾರಿ ಮಳೆ ಸಾಧ್ಯತೆ. ಭಾರಿ ಮಳೆ ಸಾಧ್ಯತೆ ಹಿನ್ನಲೆ ಈ ಜಿಲ್ಲೆಗಳಿಗೆ ಡಿಸೆಂಬರ್ 2, 3 ರಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 3 ದಿನಗಳ ಕಾಲ ಬೆಂಗಳೂರಿನಲ್ಲಿ ಕನಿಷ್ಠ 19° ಹಾಗೂ ಗರಿಷ್ಠ 23° ಉಷ್ಣಾಂಶ ಇರಲಿದೆ ಎಂದು ಹೇಳಿದ್ದಾರೆ.
Published by
