Ghost Story : ದೆವ್ವ ಇದೆಯೋ ಇಲ್ಲವೋ ಎಂಬ ವಿಚಾರವಾಗಿ ಬಹಳ ವರ್ಷಗಳಿಂದಲೂ ಚರ್ಚೆ ನಡೆಯುತ್ತಲೇ ಇದೆ. ಕೆಲವರು ನಂಬಿದರೆ, ಇನ್ನು ಕೆಲವರೂ ದೆವ್ವ ಎಂಬುದು ಒಂದು ಭ್ರಮೆ ಅಷ್ಟೇ ಎನ್ನುತ್ತಾರೆ. ಆದರೂ, ದೆವ್ವ ಎಂದರೆ ಭಯಪಡುವ ಜನರೇ ಹೆಚ್ಚು. ಇಂತಹ ಮಂದಿ ಹಾರರ್ ಸಿನಿಮಾಗಳನ್ನು ನೋಡಲು ಕೂಡ ಭಯಪಡುತ್ತಾರೆ.

ಆದರೆ, ಕೆಲವರಿಗೆ ಹಾರರ್​ ಸಿನಿಮಾಗಳೆಂದರೆ ತುಂಬಾ ಇಷ್ಟ. ಬಹುತೇಕ ಹಾರರ್ ಸಿನಿಮಾಗಳನ್ನು ಕಲ್ಪನೆಯಲ್ಲಿ ಬರೆಯಲಾಗುತ್ತದೆ. ಆದರೆ, ನಾವೀಗ ಹೇಳುತ್ತಿರುವ ಕತೆಯನ್ನು ಸಿನಿಮಾ ಮಾಡಿದರೆ ನಂಬರ್ ಒನ್ ಭೂತದ ಸಿನಿಮಾವಾಗುತ್ತದೆ. ರೀಲ್ ಕಥೆಯನ್ನೇ ಮರೆಯುವಂತೆ ಮಾಡುವ ನೈಜ ಹಾರರ್ ಸ್ಟೋರಿ ಇದು!

ಕೇರಳದ ಭೂತ ಬಂಗಲೆ ಎಂದೂ ಕರೆಯಲ್ಪಡುವ ಬೋನಕಾಡ್ ಬಂಗಲೆಯನ್ನು ಬ್ರಿಟಿಷರು 1951ರಲ್ಲಿ ನಿರ್ಮಿಸಿದರು. ಇದು ಅಗಸ್ತ್ಯ ಪರ್ವತ ಶ್ರೇಣಿಯ ಹಚ್ಚ ಹಸಿರಿನ ಕಾಡುಗಳ ನಡುವೆ ಇದೆ. ಇದನ್ನು 25 ಜಿಬಿ ಬಂಗಲೆ ಎಂದು ಕರೆಯಲಾಗುತ್ತದೆ. ಈ ಬಂಗಲೆಯನ್ನು ನಿರ್ಮಿಸಿದ ಬ್ರಿಟಿಷ್​ ಮೂಲದ ವ್ಯಕ್ತಿ ಚಹಾ ತೋಟದ ವ್ಯವಸ್ಥಾಪಕರಾಗಿದ್ದರು. ಅವರು ತಮ್ಮ ಕುಟುಂಬದೊಂದಿಗೆ ಈ ಮನೆಯಲ್ಲಿ ವಾಸಿಸುತ್ತಿದ್ದರು. ಒಂದು ದಿನ ಅವರ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿತು. ಇದಾದ ಬಳಿಕ ಅವರು ತಮ್ಮ ಹೆಂಡತಿಯೊಂದಿಗೆ ಲಂಡನ್‌ಗೆ ಹೋದರು. ಅಲ್ಲಿಂದಾಚೆಗೆ ಈ ಬಂಗಲೆಯ ಕತೆಗಳು ಹುಟ್ಟಿಕೊಂಡವು. ಅಂದಿನಿಂದ ಇಂದಿನವರೆಗೂ ಕತೆ ಸಾಗತ್ತಲೇ ಇದೆ.

ಮಗುವಿನ ಸಾವಿನ ನಂತರ ಅನೇಕ ವದಂತಿಗಳು ಆ ಪ್ರದೇಶದಲ್ಲಿ ಹರಡಿತು. ಕಿಟಕಿಯ ಗಾಜು ಒಡೆಯುವ ಸದ್ದು, ಕಿರುಚಾಟ, ಬಂಗಲೆಯಲ್ಲಿ ದೆವ್ವ ಕಾಣಿಸುವುದು ಹೀಗೆ ಹಲವು ಕತೆಗಳು ಹರಿದಾಡತೊಡಗಿದವು. ಒಂದು ದಿನ ಸ್ಥಳೀಯ ಹುಡುಗಿಯೊಬ್ಬಳು ಉರುವಲು ಸಂಗ್ರಹಿಸಲು ಹೋದಾಗ ಬಂಗಲೆಗೆ ಹೋಗಿ ಹಿಂದಿರುಗಿದ ನಂತರ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದಳು. ಅವಿದ್ಯಾವಂತ ಹುಡುಗಿ ಇಂಗ್ಲಿಷ್ ಅನ್ನು ನಿರರ್ಗಳವಾಗಿ ಮಾತನಾಡುತ್ತಿದ್ದಳು. ಅಲ್ಲದೆ, ಓದುವುದು ಮತ್ತು ಬರೆಯುವುದನ್ನು ಮಾಡುತ್ತಿದ್ದಳು. ಸತ್ತ ಮಗುವಿನ ಆತ್ಮವು ಹುಡುಗಿಯನ್ನು ಆವರಿಸಿಕೊಂಡಿದೆ ಎಂದು ಅನೇಕ ಜನರು ನಂಬಲು ಶುರು ಮಾಡಿದರು.

ಅಂದಹಾಗೆ ಬೋನಕಾಡ್ ರಾಜಧಾನಿ ತಿರುವನಂತಪುರಂ ನಗರದಿಂದ 50 ಕಿಮೀ ದೂರದಲ್ಲಿದೆ. ಸರ್ಕಾರದ ಕಟ್ಟುನಿಟ್ಟಿನ ನಿರ್ಬಂಧಗಳಿಂದಾಗಿ, ಈ ಪ್ರದೇಶದಲ್ಲಿ ಯಾವುದೇ ಹೋಟೆಲ್‌ಗಳು ಅಥವಾ ರೆಸಾರ್ಟ್‌ಗಳಿಲ್ಲ. ಬಂಗಲೆಯ ಬಾಗಿಲು ಮತ್ತು ಕಿಟಕಿಗಳನ್ನು ಮುರಿದು ಕೆಲವು ಮರದ ಹಲಗೆಗಳಿಂದ ಬಾಗಿಲುಗಳನ್ನು ಮುಚ್ಚಲಾಗಿದೆ. ಹಗಲಿನಲ್ಲಿ ಮನೆಯಿಂದ ಹೊರಗೆ ಹೋಗುವ ಪ್ರೇತ ಪ್ರತಿ ರಾತ್ರಿ ಇಲ್ಲಿಗೆ ಬಂದು ತಿರುಗಾಡುತ್ತದೆ ಎಂದು ಸ್ಥಳೀಯರು ನಂಬಿದ್ದಾರೆ.

ಬಂಗಲೆಯನ್ನು ನಿರ್ಮಿಸಿದ ಆಂಗ್ಲರು ಮೊದಲು ಈ ಸ್ಥಳವನ್ನು ಹುಡುಕಲು ಕರಿಂತಂದನ್ ಎಂಬ ಬುಡಕಟ್ಟು ಯುವಕನ ಸಹಾಯವನ್ನು ಪಡೆದರು ಎಂದು ಕತೆ ಹೇಳುತ್ತದೆ. ಮನೆ ಕಟ್ಟಿದ ಬಳಿಕ ಬ್ರಿಟಿಷ್ ಇಂಜಿನಿಯರ್, ಬುಡಕಟ್ಟು ಯುವಕನನ್ನು ಕೊಂದನೆಂದು ಹೇಳಲಾಗುತ್ತದೆ. ಕೊಲೆಯಾದ ಯುವಕನು ಪ್ರೇತವಾಗಿ ಆಂಗ್ಲ ಮೂಲದ ವ್ಯಕ್ತಿಯ ಮಗಳನ್ನು ಕೊಂದನು. ಇಂದಿಗೂ ಕರಿಂತಂದನ್​ ಆತ್ಮ ಮತ್ತು ಬ್ರಿಟಿಷ್​ ವ್ಯಕ್ತಿಯ ಮಗಳ ಆತ್ಮ ಅಲ್ಲಿ ಸಂಚರಿಸುತ್ತದೆ ಎಂದು ಸ್ಥಳೀಯರು ಇನ್ನೂ ಬಲವಾಗಿ ನಂಬಿದ್ದಾರೆ.

Published by

✍️ಪ್ರಶಾಂತ್ ಎಚ್ ವಿ

Leave a Reply

Your email address will not be published. Required fields are marked *