ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್​ (Cancer) ಹೆಸರು ಕೇಳಿದರೆ ಸಾಕು ಜನ ನಡುಗುತ್ತಾರೆ. ಏಕೆಂದರೆ ಇದು ಜಗತ್ತನ್ನೇ (World) ಬೆಚ್ಚಿ ಬೀಳಿಸುತ್ತಿರುವ ಮಹಾಮಾರಿ ಕಾಯಿಲೆ ಆಗಿದೆ. ಇದರಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಈ ಭಯಾನಕ ಕಾಯಿಲೆಗೆ ತುತ್ತಾಗುವುದನ್ನು ತಡೆಗಟ್ಟಬಹುದು ಎಂದು ತಜ್ಞರು ಹೇಳುತ್ತಾರೆ.

ಇನ್ನೂ ಈ ಬಗ್ಗೆ ಸೆಲೆಬ್ರಿಟಿ ಡಯೆಟಿಷಿಯನ್ ನಿಕೋಲ್ ಆಂಡ್ರ್ಯೂಸ್ ಇತ್ತೀಚೆಗಷ್ಟೇ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕ್ಯಾನ್ಸರ್ ಬಗ್ಗೆ ಆಘಾತಕಾರಿ ಸತ್ಯವೊಂದನ್ನು ಬಹಿರಂಗಪಡಿಸಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದೇನಪ್ಪಾ ಅಂದರೆ ನಾವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಎರಡು ರೀತಿಯ ಅಪಾಯಕಾರಿ ಅಂಶಗಳಿದ್ದು ಇವು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ ಅವು ಯಾವುವು ಎಂದು ನೋಡೋಣ ಬನ್ನಿ.

ನಿಕೋಲ್ ಆಂಡ್ರ್ಯೂಸ್ ಅವರು ಹೇಳುವ ಪ್ರಕಾರ, ಕ್ಯಾನ್ಸರ್​ಗೆ ಮುಖ್ಯ ಕಾರಣವೆಂದರೆ ಆಲ್ಕೋಹಾಲ್ ಮತ್ತು ಸಂಸ್ಕರಿಸಿದ ಮಾಂಸ. ಆಲ್ಕೋಹಾಲ್ ಸೇವನೆಯು ಯಕೃತ್ತಿನ ಅಪಾಯವನ್ನು ಮಾತ್ರವಲ್ಲದೇ ಸ್ತನ, ಬಾಯಿ, ಗಂಟಲು, ಅನ್ನನಾಳ ಮತ್ತು ಕರುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆಲ್ಕೋಹಾಲ್ ದೇಹಕ್ಕೆ ಪ್ರವೇಶಿಸಿದಾಗ, ಇದು ಅಸಿಟಾಲ್ಡಿಹೈಡ್ ಆಗಿ ಬದಲಾಗುತ್ತದೆ. ಇದು ಡಿಎನ್‌ಎಗೆ ಹಾನಿ ಮಾಡುತ್ತದೆ ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಅಂದರೆ, ಆಲ್ಕೋಹಾಲ್ ಕಾರ್ಸಿನೋಜೆನ್ ಆಗಿ ಕಾರ್ಯನಿರ್ವಹಿಸುತ್ತದೆ.

ಸಂಸ್ಕರಿಸಿದ ಮಾಂಸ ಕೂಡ ಕ್ಯಾನ್ಸರ್ ಕಾರಕವಾಗಿದೆ ಎಂದು ನಿಕೋಲ್ ಆಂಡ್ರ್ಯೂಸ್ ಹೇಳಿದ್ದಾರೆ. ಹ್ಯಾಮ್, ಸಲಾಮಿ, ಬೇಕನ್ ಮತ್ತು ಅದರೊಂದಿಗೆ ತಯಾರಿಸಿದ ಸಾಸೇಜ್‌ಗಳು (ಉದಾಹರಣೆಗೆ ಫ್ರಾಂಕ್‌ಫರ್ಟರ್‌ಗಳು, ಚೊರಿಜೊ) ಸಹ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಇವು ನೈಟ್ರೇಟ್‌ಗಳು ಮತ್ತು ಎನ್-ನೈಟ್ರೋಸೋ ಸಂಯುಕ್ತಗಳಂತಹ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುತ್ತವೆ. ಇವುಗಳು ವಿಶೇಷವಾಗಿ ಕರುಳಿನ ಕ್ಯಾನ್ಸರ್​ಗೆ ಕಾರಣವಾಗಿವೆ. ಇದಲ್ಲದೇ, ಹೆಚ್ಚಿನ ತಾಪಮಾನದಲ್ಲಿ ಇವುಗಳನ್ನು ಬೇಯಿಸುವುದು ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು ಮತ್ತು ಹೆಟೆರೋಸೈಕ್ಲಿಕ್ ಅಮೈನ್‌ಗಳಂತಹ ಅಪಾಯಕಾರಿ ಅಂಶಗಳನ್ನು ಉತ್ಪಾದಿಸುತ್ತದೆ. ಗೋಮಾಂಸದಲ್ಲಿರುವ ಹೀಮ್ ಕಬ್ಬಿಣವು ಜೀರ್ಣಕ್ರಿಯೆಯ ಸಮಯದಲ್ಲಿ ಹಾನಿಕಾರಕ ಸಂಯುಕ್ತಗಳಾಗಿ ಒಡೆಯುತ್ತದೆ ಮತ್ತು ಕೊಲೊನ್ ಅನ್ನು ಹಾನಿಗೊಳಿಸುತ್ತದೆ.

ಸಕ್ಕರೆ ತಿನ್ನುವುದರಿಂದ ಕ್ಯಾನ್ಸರ್ ಬರುವುದಿಲ್ಲ

ಸಕ್ಕರೆ ತುಂಬಾ ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇದು ನೇರವಾಗಿ ಕ್ಯಾನ್ಸರ್​ಗೆ ಕಾರಣವಾಗುವುದಿಲ್ಲ. ಸಕ್ಕರೆ ಕ್ಯಾನ್ಸರ್ ಕೋಶಗಳನ್ನು ಹೆಚ್ಚಿಸುವುದಿಲ್ಲ. ಅಲ್ಲದೇ ಮಿತವಾಗಿ ಸೇವಿಸಿದರೆ ಯಾವುದೇ ಅಪಾಯ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಹೆಚ್ಚು ಸಕ್ಕರೆ ಸೇವನೆಯು ಸಮಸ್ಯೆಗಳನ್ನು ಉಂಟು ಮಾಡಬಹುದು. ಸಕ್ಕರೆ ಸೇವನೆ ಹೆಚ್ಚಾದರೆ ದೇಹಕ್ಕೆ ಹೆಚ್ಚು ಕ್ಯಾಲೋರಿ ಸೇರಿ ತೂಕ ಹೆಚ್ಚಾಗುತ್ತದೆ. ಹೆಚ್ಚುವರಿ ದೇಹದ ಕೊಬ್ಬು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಆಂಡ್ರ್ಯೂಸ್ ತಿಳಿಸಿದ್ದಾರೆ.

ಸ್ಥೂಲಕಾಯತೆ – ಕ್ಯಾನ್ಸರ್‌ಗೆ ಪ್ರಮುಖ ಕಾರಣ

ಆಂಡ್ರ್ಯೂಸ್ ಸಂದರ್ಶನವೊಂದರಲ್ಲಿ ಸ್ಥೂಲಕಾಯತೆಯು ಕನಿಷ್ಠ 13 ರೀತಿಯ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ. ದೇಹದಲ್ಲಿ ಹೆಚ್ಚುವರಿ ಕೊಬ್ಬಿನ ಶೇಖರಣೆಯು ದೀರ್ಘಕಾಲದ ಉರಿಯೂತ, ಹಾರ್ಮೋನುಗಳ ಅಸಮತೋಲನ ಮತ್ತು ಚಯಾಪಚಯ ಬದಲಾವಣೆಗಳನ್ನು ಉಂಟು ಮಾಡುತ್ತದೆ. ಇವೆಲ್ಲವೂ ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತವೆ. ಆದ್ದರಿಂದ, ಕ್ಯಾನ್ಸರ್ ತಡೆಗಟ್ಟಲು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಉತ್ತಮ.

ಸಮತೋಲಿತ ಆಹಾರ

ಆರೋಗ್ಯಕರ, ಸಮತೋಲಿತ ಆಹಾರವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗುಣಮಟ್ಟದ ಪ್ರೋಟೀನ್‌ ಅಂಶವಿರುವ ಆಹಾರಗಳನ್ನು ಸೇವಿಸುತ್ತ ಕೇಂದ್ರೀಕರಿಸುವಂತೆ ಆಂಡ್ರ್ಯೂಸ್ ಹೇಳುತ್ತಾರೆ. ಅಂದರೆ ಮೀನು, ಮೊಟ್ಟೆ, ಕೋಳಿ ಮಾಂಸ, ನೇರ ಮಾಂಸ (ಕಡಿಮೆ ಕೊಬ್ಬು ಇರುವ ಮಾಂಸ) ಸೇವಿಸಬೇಕು. ಅಲ್ಲದೇ, ತರಕಾರಿಗಳು ಹೆಚ್ಚಾಗಿರುವ ಆಹಾರವನ್ನು ಸೇವಿಸಬೇಕು. ಸಮತೋಲಿತ ಆಹಾರ ಎಂದರೆ ಕೆಲವು ಆಹಾರಗಳನ್ನು ಸಂಪೂರ್ಣವಾಗಿ ಕಡಿತಗೊಳಿಸುವುದು ಎಂದಲ್ಲ, ಬದಲಿಗೆ ವಿವಿಧ ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿರುವ ಆಹಾರವನ್ನು ತಿನ್ನುವುದು ಎಂದರ್ಥ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. Twelvenewz.com ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಜವಾಬ್ದಾರಿಯಲ್ಲ

ನಮ್ಮ youtube ಚಾನೆಲ್ ಅನ್ನು subscribe ಮಾಡಿ ನಮಗೆ ನಿಮ್ಮ ಬೆಂಬಲ ನೀಡಿ. ನಾವು ಯಾವುದೇ ಅಸಂಬದ್ಧ ವಿಡಿಯೋಗಳನ್ನು ಹರಿಬಿಡುವುದಿಲ್ಲ. ನಿಮ್ಮ ಬಳಿ ಹಣ ಕೇಳುವುದಿಲ್ಲ ನಿಮ್ಮ ಬೆಂಬಲವಷ್ಟೇ ನಮಗೆ ಮುಖ್ಯ ದಯಮಾಡಿ ನಮ್ಮ ‘ಬಾ ಗುರು ಕಥೆ ಕೇಳು’ ಚಾನೆಲ್ ಅನ್ನು subscribe ಮಾಡಿ 🙏

Published by

twelvenewz.com

Leave a Reply

Your email address will not be published. Required fields are marked *