Team India : ಪರ್ತ್​ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿಯುವ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿ 2024-25ರಲ್ಲಿ ಟೀಮ್​ ಇಂಡಿಯಾ ಉತ್ತಮ ಆರಂಭವನ್ನು ಕಂಡಿದೆ. 295 ರನ್‌ಗಳ ಭಾರಿ ಅಂತರದಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ರಲ್ಲಿ ಮುನ್ನಡೆ ಸಾಧಿಸಿದೆ.

2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ ಟೀಮ್ ಇಂಡಿಯಾ ಆಸೀಸ್ ವಿರುದ್ಧ ಅಂತಿಮ ಸರಣಿಯನ್ನು ಆಡುತ್ತಿದೆ. ಈ ಮೆಗಾ ಈವೆಂಟ್‌ನಲ್ಲಿ ಫೈನಲ್‌ಗೆ ತಲುಪಬೇಕಾದರೆ, ಆಸೀಸ್ ವಿರುದ್ಧ ನಾಲ್ಕು ಟೆಸ್ಟ್‌ಗಳನ್ನು ಗೆಲ್ಲಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮ ವೈಯಕ್ತಿಕ ಕಾರಣಗಳಿಂದ ಮೊದಲ ಟೆಸ್ಟ್ ಪಂದ್ಯವನ್ನು ಕಳೆದುಕೊಂಡರು. ಆದರೆ, ನಾಯಕನ ಜವಾಬ್ದಾರಿಯನ್ನು ವಹಿಸಿಕೊಂಡ ಉಪನಾಯಕ ಜಸ್ಪ್ರೀತ್ ಬುಮ್ರಾ ಅವರು ತಮ್ಮ ಕೆಲಸವನ್ನು ಸಮರ್ಥವಾಗಿ ಪೂರೈಸಿದರು. ನಾಯಕತ್ವದ ಹೊರತಾಗಿ ಆಟಗಾರನಾಗಿಯೂ ಉತ್ತಮ ಪ್ರದರ್ಶನ ತೋರಿದ ಬುಮ್ರಾ, ನಾಯಕನಾಗಿ ಮೊದಲ ಪ್ರಯತ್ನದಲ್ಲೇ ಅಮೋಘ ಗೆಲುವು ಪಡೆದರು.

ಪರ್ತ್ ಸ್ಟೇಡಿಯಂನಲ್ಲಿ ಶುಕ್ರವಾರ (ನ.22) ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ವೇಗಿಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ಪಿಚ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಆರಂಭದಲ್ಲಿಯೇ ಎಡವಿದರು. ಮೊದಲ ಇನ್ನಿಂಗ್ಸ್​ನಲ್ಲಿ ಆರಂಭಿಕರಾದ ಯಶಸ್ವಿ ಜೈಸ್ವಾಲ್ (0) ಮತ್ತು ಒನ್​ಡೌನ್​ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ (0) ರನ್ ಖಾತೆ ತೆರೆಯದೆ ನಿರ್ಗಮಿಸಿದರು.

ಆದರೆ, ಮತ್ತೊಬ್ಬ ಆರಂಭಿಕ ಆಟಗಾರ ಕೆಎಲ್ ರಾಹುಲ್ (26) ಗಟ್ಟಿಯಾಗಿ ನಿಂತರೂ ಥರ್ಡ್​ ಅಂಪೈರ್ ವಿವಾದಾತ್ಮಕವಾಗಿ ಅವರನ್ನು ಔಟ್ ಎಂದು ಘೋಷಿಸಿದರು. ಮತ್ತೊಂದೆಡೆ ವಿರಾಟ್ ಕೊಹ್ಲಿ (5) ಕೂಡ ನಿರಾಸೆ ಮೂಡಿಸಿದರು. ರಿಷಭ್ ಪಂತ್ (37) ಹಾಗೂ ಆಲ್ ರೌಂಡರ್ ನಿತೀಶ್ ರೆಡ್ಡಿ (41) ತಂಡಕ್ಕೆ ಆಸರೆಯಾದರು. ಇದರೊಂದಿಗೆ ಟೀಮ್​ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳ ಗೌರವಾನ್ವಿತ ಸ್ಕೋರ್‌ಗೆ ಆಲೌಟ್ ಆಯಿತು. ಆಸೀಸ್ ಬೌಲರ್‌ಗಳ ಪೈಕಿ ಜೋಶ್ ಹ್ಯಾಸಲ್‌ವುಡ್ ನಾಲ್ಕು ವಿಕೆಟ್ ಪಡೆದರು. ಮಿಚೆಲ್​ ಸ್ಟಾರ್ಕ್, ನಾಯಕ ಪ್ಯಾಟ್​ ಕಮ್ಮಿನ್ಸ್ ಹಾಗೂ ಮಿಚೆಲ್ ಮಾರ್ಷ್ ಎರಡು ವಿಕೆಟ್ ಪಡೆದರು.

ಇದಾದ ಬಳಿಕ ಮೊದಲ ದಿನವೇ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾವನ್ನು ಬುಮ್ರಾ ತಮ್ಮ ಚುರುಕಿನ ವೇಗದಿಂದ ಶಾಕ್​ ನೀಡಿದರು. ಬುಮ್ರಾಗೆ ಮೊಹಮ್ಮದ್ ಸಿರಾಜ್ ಮತ್ತು ಹರ್ಷಿತ್ ರಾಣಾ ಕೂಡ ಸಾಥ್​ ನೀಡಿದರು. ಮೊದಲ ದಿನದಾಟದ ಅಂತ್ಯಕ್ಕೆ ಆಸಿಸ್​ ಪಡೆ 67 ರನ್ ಗಳಿಸಿ ಏಳು ವಿಕೆಟ್ ಕಳೆದುಕೊಂಡಿತು. ಶನಿವಾರದ ಎರಡನೇ ದಿನದಾಟದಲ್ಲಿ ಆಸೀಸ್ 104 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದಾಗಿ 46 ರನ್ ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್​ ಇಂಡಿಯಾಗೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಉತ್ತಮ ಆರಂಭ ನೀಡಿದರು. ಭಾನುವಾರ ಮೂರನೇ ದಿನದಾಟದಲ್ಲಿ ಯಶಸ್ವಿ ಶತಕ (161) ಪೂರೈಸಿದರೆ, ರಾಹುಲ್ 77 ರನ್ ಗಳಿಸಿ ಮಿಂಚಿದರು.

ಜೈಸ್ವಾಲ್​ ಮತ್ತು ರಾಹುಲ್​ ಅಮೋಘ ಜೊತೆಯಾಟದಿಂದ ಪರ್ತ್​ನಲ್ಲಿ ತನ್ನ ಹಿಡಿತ ಗಟ್ಟಿ ಮಾಡಿಕೊಂಡ ಟೀಮ್​ ಇಂಡಿಯಾ, ಕೊಹ್ಲಿಯ ಅಜೇಯ ಶತಕ (100) ಹಾಗೂ ನಿತೀಶ್ ರೆಡ್ಡಿ ಅವರ ಅಮೋಘ ಇನ್ನಿಂಗ್ಸ್ (27 ಎಸೆತಗಳಲ್ಲಿ ಔಟಾಗದೆ 38) ಜೊತೆಗೆ ಗಟ್ಟಿಯಾಗಿ ನಿಂತಿತು. ಆರು ವಿಕೆಟ್ ನಷ್ಟಕ್ಕೆ 487 ರನ್ ಗಳಿಸಿ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಆಸೀಸ್​ ತಂಡಕ್ಕೆ 534 ರನ್​ಗಳ ಬೃಹತ್ ಗುರಿ ನೀಡಿತು. ಮತ್ತೊಮ್ಮೆ ಎರಡನೇ ಇನ್ನಿಂಗ್ಸ್​ನಲ್ಲೂ ಆರಂಭದಿಂದಲೇ ದಾಳಿ ಆರಂಭಿಸಿದ ಭಾರತದ ಬೌಲರ್​ಗಳು ಆಸೀಸ್ ತಂಡವನ್ನು 238 ರನ್​ಗಳಿಗೆ ಆಲೌಟ್ ಮಾಡಿದರು. ಇದರೊಂದಿಗೆ ಭಾರತ ತಂಡ ಕಾಂಗರೂ ನೆಲದಲ್ಲಿ ಆಸೀಸ್​ಗೆ ಭಾರೀ ಆಘಾತ ನೀಡಿದೆ.

Published by

twelvenewz.com

Leave a Reply

Your email address will not be published. Required fields are marked *