ಬೆಂಗಳೂರು : ಮುಂದಿನ 6 ತಿಂಗಳಲ್ಲಿ ರಾಜ್ಯದ 1.26 ಲಕ್ಷ ರೈತರಿಗೆ ಬಗರ್ ಹುಕುಂ ಯೋಜನೆ ಅಡಿ ಸಾಗುವಳಿ ಚೀಟಿ ನೀಡುವ ಗುರಿ ಹೊಂದಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 3800 ದಾಖಲೆ ರಹಿತ ವಸತಿ ಪ್ರದೇಶಗಳನ್ನು ಮುಂದಿನ ಆರು ತಿಂಗಳಲ್ಲಿ ಕಂದಾಯ ಗ್ರಾಮಗಳೆಂದು ಘೋಷಿಸಲಾಗುವುದು.

ಆ ಗ್ರಾಮಗಳಲ್ಲಿ ವಾಸಿಸುವ 1.50 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು. ಬಗರ್ ಹುಕುಂ ಸಾಗುವಳಿದಾರರಿಂದ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗಿವೆ. ಕಂದಾಯ ಇಲಾಖೆಯಿಂದ ಆಂದೋಲನದ ರೀತಿಯಲ್ಲಿ ಅರ್ಜಿಗಳ ವಿಲೇವಾರಿ ಮಾಡಿ ಅರ್ಹರಿಗೆ ಹಕ್ಕುಪತ್ರ ನೀಡಲಿದೆ ಎಂದು ಹೇಳಿದರು.

ವಿವಿಧ ಪ್ರದೇಶಗಳಲ್ಲಿ ತಾಂಡಾಗಳು, ಹಟ್ಟಿಗಳು, ಕ್ಯಾಂಪ್ ಗಳಿಗೆ ಅಧಿಕೃತ ಮಾನ್ಯತೆ ಇಲ್ಲದ ಕಾರಣ ಅವುಗಳಿಗೆ ಕಂದಾಯ ಗ್ರಾಮದ ಅಧಿಕಾರ ನೀಡಲು ಸರ್ಕಾರ ನಿರ್ಧರಿಸಿದೆ. ಹಕ್ಕು ಪತ್ರ ಮಂಜೂರು ನಿಯಮವನ್ನು ಬಿಗಿ ಮಾಡಲಾಗಿದ್ದು, ಅರ್ಜಿದಾರರ ಹೆಸರಲ್ಲಿ ಜಮೀನು ಇದೆಯೇ, ಸಾಗುವಳಿ ನಡೆದಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಬಗರ್ ಹುಕುಂ ಸಮಿತಿಗಳ ನಡಾವಳಿಗಳನ್ನು ಡಿಜಿಟಲ್ ಮಾಡಲಾಗುವುದು. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಹರಿಗೆ ಜಮೀನು ನೋಂದಣಿ ಮಾಡಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.

1.26 ಲಕ್ಷ ಬಗರ್ ಹುಕುಂ ಸಾಗುವಳಿ ರೈತರ ಅರ್ಜಿಗಳನ್ನು ಮಾನ್ಯ ಮಾಡಲಾಗಿದ್ದು, ಈ ತಿಂಗಳಲ್ಲಿ 5000 ಮಂದಿಗೆ ಡಿಜಿಟಲ್ ಸಾಗುವಳಿ ಪತ್ರ ನೀಡಲಾಗುವುದು. ಜನವರಿಗೆ 20,000 ರೈತರಿಗೆ, 6 ತಿಂಗಳಲ್ಲಿ ಎಲ್ಲಾ ರೈತರಿಗೆ ಡಿಜಿಟಲ್ ಸಾಗುವಳಿ ಪತ್ರ ನೀಡಲಾಗುವುದು ಎಂದು ಹೇಳಿದ್ದಾರೆ.

Published by

Leave a Reply

Your email address will not be published. Required fields are marked *