ಬೆಂಗಳೂರಿನಲ್ಲಿ ಮಂಜಿನೊಂದಿಗೆ ಚಳಿ ಮುಂದುವರಿದಿದೆ. ಇಂದು (ಡಿಸೆಂಬರ್ 8, ಭಾನುವಾರ) ಕೂಡ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇದೇ ವಾತಾವರಣ ಇರಲಿದೆ. ಬೆಳಗಿನ ಜಾವ ಹೆಚ್ಚು ಮಂಜು ಇರುವ ಕಾರಣ ಚಾಲಕರಿಗೆ ವಾಹನಗಳನ್ನು ಚಲಾಯಿಸುವುದು ಸವಾಲಿನ ಕೆಲಸವಾಗಿದೆ.

ಚಳಿಯ ಕಾರಣದಿಂದ ಜನ ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಗಿದೆ. ವಾರಾಂತ್ಯದ ರಜೆ ಇರುವ ಕಾರಣ ಹೆಚ್ಚಿನ ಮಂದಿ ಹೊರಗಡೆ ಬರಲು ಮನಸ್ಸು ಮಾಡುತ್ತಿಲ್ಲ, ಅಗತ್ಯ ಕೆಲಸಗಳು ಇರುವವರ ಓಡಾಟ ಕಂಡು ಬಂದಿತು. ಉಲ್ಲನ್ ಸ್ವೆಟರ್ ಮತ್ತು ಟೋಪಿಗಳನ್ನು ಧರಿಸಿರುವುದು ಸಾಮಾನ್ಯವಾಗಿದೆ. ಕೆಲವರು ಫೈಯರ್ ಕ್ಯಾಂಪ್ ಗಳ ಮೊರೆ ಹೋಗಿದ್ದಾರೆ.

ಕಳೆದೊಂದು ವಾರ ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿತ್ತು. ಇದೀಗ ಫೆಂಗಲ್ ಸೈಕ್ಲೋನ್ ದುರ್ಬಲಗೊಂಡಿದೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರಿನಲ್ಲೂ ಮಂಜಿನ ಜೊತೆಗೆ ಚಳಿಯ ವಾತಾವರಣ ಮುಂದುವರಿದಿದೆ. ಬೆಂಗಳೂರು ಹವಾಮಾನ ಕೇಂದ್ರದ ದೈನಂದಿನ ವರದಿಯ ಪ್ರಕಾರ, ರಾಜ್ಯದ ಮೂರ್ನಾಲ್ಕು ಜಿಲ್ಲೆಗಳಲ್ಲಿ ಶನಿವಾರ (ಡಿಸೆಂಬರ್ 7) ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್ ನಲ್ಲಿ ಗರಿಷ್ಠ 5 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ 4, ಆನವಟ್ಟಿ 2, ಹುಬ್ಬಳ್ಳಿ, ಕಲಘಟಗಿ, ಚಿಟಗುಪ್ಪ, ನರಗುಂದ ಹಾಗೂ ಹುಂಚದಕಟ್ಟೆಯಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ.

ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ಪೂರ್ವ ಸಮಭಾಜಕ ಹಿಂದೂ ಮಹಾಸಾಗರದ ಮೇಲಿನ ವಾಯು ಚಂಡಮಾರುತದ ಪ್ರಭಾವದ ಅಡಿಯಲ್ಲಿ ನಿನ್ನೆ (ಡಿಸೆಂಬರ್ 7, ಶನಿವಾರ) ಬೆಳಗ್ಗೆ 8.30ರ ಸಮಯದಲ್ಲಿ ಈ ಪ್ರದೇಶದಲ್ಲಿ ಕಡಿಮೆ ಒತ್ತಡದ ವಾತಾವರಣ ರೂಪುಗೊಂಡಿತ್ತು. ಇದು ಪಶ್ಚಿಮ ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಹೆಚ್ಟು ಗುರುತಿಸಲ್ಪಡುತ್ತದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.

ಡಿಸೆಂಬರ್ 8ರ ಭಾನುವ ಮಳೆ ಸಾಧ್ಯತೆ ಇರುವ ಜಿಲ್ಲೆಗಳು

ಇಂದು (ಡಿಸೆಂಬರ್ 8, ಭಾನುವಾರ) ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ ಇದೆ. ಒಳನಾಡಿನಲ್ಲಿ ದಟ್ಟ ಮಂಜಿನ ವಾತಾವಾರಣ ಇರಲಿದೆ. ಮುಂದಿನ ನಾಲ್ಕು ದಿನಗಳ ಕಾಲ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮಂಡ್ಯ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ವಾತಾವರಣದಲ್ಲಿ ಯಾವುದೇ ಮಹತ್ವದ ಬದಲಾವಣೆಯ ನಿರೀಕ್ಷೆಯಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗಲಿನಲ್ಲಿ ಸ್ಪಷ್ಟವಾದ ಆಕಾಶ ಇರಲಿದ್ದು, ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಭಾಗಶಃ ಮೋಡ ಕವಿದ ಆಕಾಶ ಇರುತ್ತದೆ. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

Published by

Leave a Reply

Your email address will not be published. Required fields are marked *