
ಫೆಂಗಲ್ ಚಂಡಮಾರುತದಿಂದ ಕಳೆದ ಒಂದು ವಾರದಿಂದ ವರುಣನ ಆರ್ಭಟ ರಾಜ್ಯದಲ್ಲಿ ಜೋರಾಗಿತ್ತು. ಇಂದು ಮಳೆ ಬಿಡುವು ನೀಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 8ರವರೆಗೆ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಚಂಡಮಾರುತದ ಪ್ರಭಾವ ತುಸು ತಗ್ಗಿದ್ದರೂ ಪೂರ್ವ ಮಧ್ಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಕರಾವಳಿ ಕರ್ನಾಟಕದ ಕಡೆಗೆ ದುರ್ಬಲಗೊಂಡಿದೆ.
ಚಂಡಮಾರುತದ ಪರಿಚಲನೆಯು ಸಮುದ್ರ ಮಟ್ಟದಿಂದ 5.8 ಕಿ.ಮೀ ಮೇಲಿದ್ದು, ಮುಂದಿನ 24 ಗಂಟೆಗಳಲ್ಲಿ ಇದು ಪಶ್ಚಿಮಾಭಿಮುಖವಾಗಿ ಚಲಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ಮುಂದಿನ 24 ಗಂಟೆಗಳ ಕಾಲ ಕರ್ನಾಟಕದ ಒಳನಾಡಿನಲ್ಲಿ ಶುಷ್ಕ ಹವಾಮಾನ ಇರಲಿದೆ ಎಂದು ಹೇಳಿದೆ.
ಬುಧವಾರದಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಹುತೇಕ ಸ್ಥಳಗಳಲ್ಲಿ ಮತ್ತು ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೆಲವೆಡೆ ಹಗುರ ಮಳೆಯಾಗಿದೆ. ಕಲಬುರ್ಗಿ, ಬೆಳಗಾವಿ, ಯಾದಗಿರಿ, ರಾಯಚೂರು, ಬೀದರ್, ಧಾರವಾಡ ಭಾಗಗಳಲ್ಲೂ ಮಳೆಯಾಗಿದೆ.
ಡಿಸೆಂಬರ್ 5ರಂದು ಗುರುವಾರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಮತ್ತು ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಕೊಡಗು, ಹಾಸನ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮತ್ತು ಕಲಬುರ್ಗಿ, ಬೆಳಗಾವಿ, ರಾಯಚೂರು, ಬೀದರ್, ಧಾರವಾಡ, ಕೊಪ್ಪಳ, ಹಾವೇರಿ, ಗದಗ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆ, ಗುಡುಗು ಸಹಿತ ಮಳೆಯಾಗಬಹುದು.
ಡಿಸೆಂಬರ್ 6ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೊಡಗು, ತುಮಕೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮತ್ತು ಕಲಬುರ್ಗಿ, ಬೆಳಗಾವಿ, ರಾಯಚೂರು, ಬೀದರ್, ಧಾರವಾಡ, ಕೊಪ್ಪಳ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಮಂಜು ಕೂಡ ಆವರಿಸಲಿದೆ.
ಡಿಸೆಂಬರ್ 7ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಮತ್ತು ತುಮಕೂರು, ಹಾಸನ, ಕೊಡಗು, ಚಿತ್ರದುರ್ಗ ಜಿಲ್ಲೆಗಳಲ್ಲಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮತ್ತು ಕಲಬುರ್ಗಿ, ಬೆಳಗಾವಿ, ರಾಯಚೂರು, ಬೀದರ್, ಧಾರವಾಡ, ಕೊಪ್ಪಳ, ಹಾವೇರಿ, ಗದಗ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.
ಡಿಸೆಂಬರ್ 8ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನಲ್ಲಿ ಒಣ ಹವಾಮಾನವು ಇರಲಿದೆ, ಮೋಡ ಕವಿದ ವಾತಾವರಣ ಇರಲಿದೆ. ಡಿಸೆಂಬರ್ 9 ಹಾಗೂ 10ರಂದು ಒಣ ಹವಾಮಾನವು ರಾಜ್ಯದ ಮೇಲೆ ಚಾಲ್ತಿಯಲ್ಲಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾಗಶಃ ಮೋಡ ಕವಿದ ಆಕಾಶವಿರಲಿದೆ. ಈ ವೇಳೆ ಹಗುರವಾದ ಮಳೆಯಾಗುವ ಸಾಧ್ಯತೆ ಇದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಡಿಗ್ರಿ ಸೆಲ್ಸಿಯಸ್ ಹಾಗು 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಿದೆ.
Published by
