
ಸಂತೆ ಬೆನ್ನೂರು : ಹೋಬಳಿ ಕೇಂದ್ರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಭಾನುವಾರ ತಡರಾತ್ರಿ ಭಾರಿ ಮಳೆ ಸುರಿದಿದೆ.
ಹೊಲ, ಗದ್ದೆಗಳಲ್ಲಿ ಹಳ್ಳದಂತೆ ಹರಿದ ನೀರು ಕೊರಕಲು ಸೃಷ್ಟಿಸಿದೆ. ಹೆಚ್ಚುವರಿ ನೀರು ಕೆರೆಗೆ ಹರಿಯುತ್ತಿದೆ. ತಡರಾತ್ರಿ ಗುಡುಗು ಸಿಡಿಲಿನ ಆರ್ಭಟದಿಂದ ಆರಂಭವಾದ ಮಳೆ ಮುಂಜಾನೆವರೆಗೂ ಸುರಿಯಿತು.
ಸಮೀಪದ ಪೊಲೀಸ್ ಠಾಣೆಯ ಆವರಣದಲ್ಲಿರುವ ಮಳೆ ಮಾಪಕದಲ್ಲಿ ಒಂದೇ ರಾತ್ರಿಗೆ 60.3 ಮೀ.ಮೀ ಮಳೆ ಬಿದ್ದಿರುವುದು ದಾಖಲಾಗಿದೆ.
ಭತ್ತದ ಗದ್ದೆಗಳಿಗೆ ನೀರು ನುಗ್ಗಿದ್ದು, ಕೊಯ್ಲಿಗೆ ಬಂದ ಬೆಳೆ ಚಾಪೆಯಂತೆ ಹರಡಿದೆ. ನೀರು ಹರಿವಿನ ರಭಸಕ್ಕೆ ಕಾಳು ಉದುರಿವೆ. ತಣಿಗೆರೆ, ಭೀಮನೆರೆ, ಹಿರೇಕೋಗಲೂರು, ಈರಗನಹಳ್ಳಿ, ಕೆಂಪನಹಳ್ಳಿ, ಉಪನಾಯ್ಕನಹಳ್ಳಿ, ಭಾಗದಲ್ಲಿ ಭತ್ತದ ಬೆಳೆಗೆ ಹಾನಿ ಸಂಭವಿಸಿದೆ. ಕೊಯ್ಲು ಮಾಡಿದ ಭತ್ತದ ಗದ್ದೆಗಳಲ್ಲಿ ಹುಲ್ಲು ಸಂಗ್ರಹಕ್ಕೂ ತೊಡಕಾಗಿದೆ.
‘ಹಿಂಗಾರು ಬೆಳೆ ಅಲಸಂದೆ ಕೊಯ್ಲು ಮಾಡಿ ಹೊಲಗಳಲ್ಲಿ ಗುಂಪು ಹಾಕಲಾಗಿತ್ತು. ಅಕಾಲಿಕ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇನ್ನೂ ಹೂವಿನ ಹಂತದಲ್ಲಿರುವ ಅಲಸಂದೆ ಬೆಳೆ ಚಿಗುರೊಡೆದು ಬಳ್ಳಿಯಂತಾದರೆ ಕಾಯಿ ಬಿಡದು’ ಎಂಬುದು ಸಂತೇಬೆನ್ನೂರು, ಗೆದ್ದಲಹಟ್ಟಿ, ಕುಳೇನೂರು, ದೊಡ್ಡಬ್ಬಿಗೆರೆ ರೈತರ ಅಳಲು.
ಸಮೀಪದ ಹಿರೇಕೋಗಲೂರು ಕೆರೆಗೆ ಭಾರಿ ಪ್ರಮಾಣದ ನೀರು ಹರಿದು ಕೋಡಿ ಬಿದ್ದಿದೆ. ಚಿಕ್ಕಬೆನ್ನೂರು, ಸಂತೇಬೆನ್ನೂರು, ಬೆಳ್ಳಿಗನೂಡು ಕೆರೆ ನೀರು ಹರಿದಿದೆ. ಅಡಿಕೆ ತೋಟಗಳಲ್ಲಿ ನಿರ್ಮಿಸಿದ ಬದುಗಳು ಕೊಚ್ಚಿ ಹೋಗಿವೆ. ಅಪಾರ ಪ್ರಮಾಣದ ನೀರು ತಗ್ಗಿನ ತೋಟಗಳಲ್ಲಿ ನಿಂತಿದೆ.
ಭೀಮನೆರೆ ಕಡಲೆ ಬೆಳೆ ತಾಕುಗಳಲ್ಲಿ ನೀರು ನಿಂತಿದೆ. ಮಳೆ ನೀರಿಗೆ ಲವಣಾಂಶ ಕರಗಿದರೆ ಕಡಲೆ ಬೆಳೆ ಇಳುವರಿ ಕುಂಠಿತಗೊಳ್ಳಬಹುದು ಎಂಬುದು ರೈತ ಆತಂಕ.
‘ಅಂದಾಜು 200 ಎಕರೆ ಭತ್ತದ ಬೆಳೆ ನೆಲಕಚ್ಚಿದೆ’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಮೆಹತಬ್ ಅಲಿ.
ತಹಶೀಲ್ದಾರ್ ಜಿ.ಎಸ್.ಶಂಕರಪ್ಪ, ಕೃಷಿ ನಿರ್ದೇಶಕ ಅರುಣ್ ಕುಮಾರ್, ಕಂದಾಯ ನಿರೀಕ್ಷಕ ಕೆ.ಎನ್.ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿಗಳಾದ ರಾಜಪ್ಪ, ತಿಲಕ್ ಹಾನಿಗೊಳಗಾದ ಬೆಳೆ ವೀಕ್ಷಣೆ ಮಾಡಿದರು.
Published by
