
ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರು ಚದುರಿದಂತೆ ಮಳೆಯಾಗುತ್ತಿದೆ. ಭಾನುವಾರ ಕೂಡ ಹಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದ್ದು ಸಂಜೆ ವೇಳೆಗೆ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಡಿಸೆಂಬರ್ 11ರಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು ಇನ್ನೊಂದು ವಾರ ರಾಜ್ಯದಲ್ಲಿ ಅಲ್ಲಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ.
ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪೂರ್ವ ಸಮಭಾಜಕ ಹಿಂದೂ ಮಹಾಸಾಗರದಲ್ಲಿ ಕಡಿಮೆ ಒತ್ತಡದ ವಾಯುಭಾರ ಕುಸಿತ ಸದ್ಯ ಶ್ರೀಲಂಕಾ ಸಮೀಪಕ್ಕೆ ತಲುಪಿದ್ದು ಡಿಸೆಂಬರ್ 11ರಂದು ತಮಿಳುನಾಡಿನ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆ ಮಾಡಲಾಗಿದೆ. ವಾಯುಭಾರ ಕುಸಿತದ ಕಾರಣ ಡಿಸೆಂಬರ್ 8ರಿಂದ 13ರವರೆಗೆ ರಾಜ್ಯದಲ್ಲಿ ಚದುರಿದಂತೆ ಸಾಧಾರಣ ಮತ್ತು ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಭಾರತದ ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಚದುರಿದಂತೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಂಧ್ರಪ್ರದೇಶದ ಕರಾವಳಿ ಪ್ರದೇಶ, ರಾಯಲಸೀಮ, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕೇರಳ, ಮಾಹೆ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತದೆ ಎಂದು ತಿಳಿಸಿದೆ. ಯಾವುದೇ ಪ್ರದೇಶಗಳಿಗೆ ಭಾರಿ ಮಳೆ ಮುನ್ಸೂಚನೆ ಕೊಡದೇ ಇದ್ದರೂ, ಸಾಧಾರಣ ಮಳೆಯಾಗಲಿದೆ ಎಂದು ಹೇಳಿದೆ.
Published by
