ರೇಷನ್ ಕಾರ್ಡ್‌ಗೆ ಸಂಬಂಧಿಸಿದಂತೆ ಇದೀಗ ಮಹತ್ವದ ಮಾಹಿತಿಯೊಂದನ್ನು ಸರ್ಕಾರ ಹಂಚಿಕೊಂಡಿದೆ. ಅಲ್ಲದೆ ಅಕ್ರಮ ರೇಷನ್ ಕಾರ್ಡ್‌ ಮಾಡಿಸಿಕೊಂಡಿರುವವರನ್ನು ಬಿಡುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರ ಪುನರುಚ್ಚರಿಸಿದೆ. ರಾಜ್ಯದಲ್ಲಿ ರೇಷನ್‌ ಕಾರ್ಡ್‌ಗೆ ಸಂಬಂಧಿಸಿದಂತೆ ಈಚೆಗೆ ಹಲವು ಗೊಂದಲಗಳು ಸೃಷ್ಟಿಯಾಗಿದ್ದವು.

ಆ ಗೊಂದಲಗಳಿಗೆ ಸರ್ಕಾರ ಈಗಾಗಲೇ ತೆರೆ ಎಳೆದಿದೆ. ಆದರೆ, ಅಕ್ರಮವಾಗಿ ಪಡಿತರದಾರರನ್ನು ಬಿಡುವುದಿಲ್ಲ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಇನ್ನು ಕರ್ನಾಟಕದಾದ್ಯಂತ 2024-25ನೇ ಸಾಲಿನಲ್ಲಿ ವಿವಿಧ ರೇಷನ್‌ ಕಾರ್ಡ್‌ ಹಾಗೂ ಪಡಿತರ ದುರುಪಯೋಗ ಪಡೆಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ಒಟ್ಟು 213 ಎಫ್.ಐ.ಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ.

ಕರ್ನಾಟಕದಲ್ಲಿ ರೇಷನ್ ಕಾರ್ಡ್‌ ವಿಚಾರವು ಭಾರೀ ಗೊಂದಲಗಳಿಗೆ ಕಾರಣವಾಗಿತ್ತು. ಕೆಲವು ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವುದು ಹಾಗೂ ಕೆಲವನ್ನು ಎಪಿಎಲ್‌ಗೆ ಬದಲಾಯಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು. ಈ ವಿಚಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ಸರ್ಕಾರ ತಾತ್ಕಾಲಿಕವಾಗಿ ಅಥವಾ ಭಾಗಶಃ ಬಿಟ್ಟಿದೆ. ಆದರೆ, ರೇಷನ್ ಕಾರ್ಡ್‌ ದುರುಪಯೋಗ ಹಾಗೂ ಪಡಿತರ ದುರುಪಯೋಗ, ಅಕ್ಕಿ ಕಳ್ಳಸಾಗಾಣಿಕೆಯ ಮೇಲೆ ಸರ್ಕಾರ ಹದ್ದಿನ ಕಣ್ಣಿರಿಸಿದೆ.

ಇದೀಗ ಆಹಾರ ಇಲಾಖೆಗೆ ಸಂಬಂಧಿಸಿದ ಉಗ್ರಾಣಗಳಿಂದ ಅಕ್ರಮವಾಗಿ ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 213 ಎಫ್.ಐ.ಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಬರೋಬ್ಬರಿ 2,68,07,872 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಲ್ಲದೆ 238 ಆರೋಪಿಗಳನ್ನು ಬಂಧಿಸಲಾಗಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಲು ಹಾಗೂ ಮೇಲ್ವಿಚಾರಣೆ ಮಾಡುವುದಕ್ಕೆ ಇಲಾಖಾ ವತಿಯಿಂದ ನೋಡಲ್ ಅಧಿಕಾರಿಗಳನ್ನು ಸಹ ವಿಭಾಗವಾರು ನೇಮಕ ಮಾಡಿರುವುದಾಗಿ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಮುಲಾಜಿಲ್ಲದೆ ಕ್ರಮ: ಇನ್ನು ಅಕ್ರಮ ರೇಷನ್‌ ಕಾರ್ಡ್‌ ಕೇಸ್‌ನಲ್ಲಿ ತಪ್ಪು ಮಾಡಿದ್ದಾರೆ ಎಂದು ಸಾಬೀತಾದರೆ ಆ ವ್ಯಕ್ತಿಯಗಳನ್ನು ಕೋರ್ಟ್‌ನ ಆದೇಶದ ಅನುಸಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದರೆ. ಈ ಸಂಬಂಧ ಮಾತನಾಡಿರುವ ಸಚಿವ ಕೆ.ಎಚ್.ಮುನಿಯಪ್ಪ ಅವರು ಅಕ್ರಮ ರೇಷನ್‌ ಕಾರ್ಡ್‌ ಹೊಂದಿರುವುದು ಸಾಬೀತಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ರಾಜ್ಯ ಸರ್ಕಾರವು ಅಕ್ರಮ ರೇಷನ್ ಕಾರ್ಡ್‌ದಾರರ ವಿರುದ್ಧ ಮಹತ್ವದ ಕಾರ್ಯಾಚರಣೆಯನ್ನು ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ ಈ ಸಂಬಂಧ ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ.

ಕರ್ನಾಟಕದಾದ್ಯಂತ 2021ನೇ ಸಾಲಿನ ಜನವರಿಯಿಂದ 2023ನೇ ಸಾಲಿನ ಮೇ ನಡುವೆ ಬರೋಬ್ಬರಿ 3,35,463 ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಗುರುತಿಸಲಾಗಿದೆ. ಈ ರೀತಿ ಗುರುತಿಸಲಾಗಿರುವ ಕಾರ್ಡ್‌ಗಳಲ್ಲಿ 13,51,30,858 ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಅಲ್ಲದೆ ಅನರ್ಹರಿಗೆ ಕೊಡಲಾಗುತ್ತಿದೆ ಸೌಲಭ್ಯಗಳಿಂದ ಆಗಿರುವ ನಷ್ಟವನ್ನು ಭರಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದಿದ್ದಾರೆ.

ಇನ್ನು ಈಗ ಬಳಸುತ್ತಿರುವ ಆಹಾರ ಇಲಾಖೆಯ ಸರ್ವರ್ ಹಳೆಯದಾಗಿದ್ದು, ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಸರ್ಕಾರ ಹೇಳಿದೆ. ಇದಾದ ನಂತರದಲ್ಲಿ ಆದ್ಯತಾ ರೇಷನ್‌ ಕಾರ್ಡ್‌ ನೀಡುವ ಕೆಲಸ ಹಾಗೂ ರೇಷನ್‌ ಕಾರ್ಡ್‌ ತಿದ್ದುಪಡಿ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Published by

✍️ಪ್ರಶಾಂತ್ ಎಚ್ ವಿ

Leave a Reply

Your email address will not be published. Required fields are marked *