ಸಿಡ್ನಿ : ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಏರ್ ಪೋರ್ಟ್ ನಲ್ಲಿ ಆಸೀಸ್ ಮಾಧ್ಯಮದವರೊಂದಿಗೆ ಸಿಟ್ಟಿಗೆದ್ದು ಕ್ಲಾಸ್ ತೆಗೆದುಕೊಂಡ ವಿಡಿಯೋ ಈಗ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ತಮ್ಮ ಮಕ್ಕಳ ಫೋಟೋ ತೆಗೆಯದಂತೆ ಎಲ್ಲಾ ಮಾಧ್ಯಮದವರು, ಕ್ಯಾಮರಾ ಮ್ಯಾನ್ ಗಳಿಗೆ ಮನವಿ ಮಾಡುತ್ತಲೇ ಇರುತ್ತಾರೆ.
ಅದೇ ರಿತಿ ಆಸ್ಟ್ರೇಲಿಯಾದಲ್ಲೂ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಆದರೆ ಬ್ರಿಸ್ಬೇನ್ ನಿಂದ ಮೆಲ್ಬೊರ್ನ್ ನತ್ತ ಪ್ರಯಾಣ ಮಾಡುವಾಗ ಕೆಲವು ಮಾಧ್ಯಮಗಳು ಕೊಹ್ಲಿ ಮತ್ತು ಮಕ್ಕಳ ವಿಡಿಯೋ ಮಾಡುತ್ತಲೇ ಇದ್ದರು. ಆರಂಭದಲ್ಲೇ ಕೊಹ್ಲಿ ವಿಡಿಯೋ, ಫೋಟೋ ತೆಗೆಯದಂತೆ ಮನವಿ ಮಾಡಿದ್ದಾರೆ. ಇದಕ್ಕೆ ಓರ್ವ ಕ್ಯಾಮರಾ ಮ್ಯಾನ್ ಸ್ಪಂದಿಸಿದ್ದು ಕ್ಯಾಮರಾ ಆಫ್ ಮಾಡಿಕೊಂಡಿದ್ದಾರೆ.
ಆದರೆ ಮತ್ತೋರ್ವ ಮಹಿಳಾ ಪತ್ರಕರ್ತೆ ವಿಡಿಯೋ ಮಾಡುತ್ತಲೇ ಇದ್ದಿದ್ದನ್ನು ಗಮನಿಸಿದ ಕೊಹ್ಲಿ ಸಿಟ್ಟಿಗೆದ್ದಿದ್ದಾರೆ. ನನ್ನ ಮಕ್ಕಳ ಜೊತೆ ನನಗೂ ಸ್ವಲ್ಪ ಪ್ರೈವೆಸಿ ಬೇಕು. ನನ್ನ ಪರ್ಮಿಷನ್ ಇಲ್ಲದೇ ನೀವು ಅವರ ಫೋಟೋ, ವಿಡಿಯೋ ಮಾಡುವ ಹಾಗಿಲ್ಲ ಎಂದು ಕೊಹ್ಲಿ ಸಿಟ್ಟಿನಲ್ಲೇ ಹೇಳಿದ್ದಾರೆ. ಬಳಿಕ ಮಹಿಳಾ ಪತ್ರಕರ್ತೆಯನ್ನು ಬದಿಗೆ ಕರೆದೊಯ್ದು ಕೆಲವು ಕಾಲ ತಿಳಿಸಿ ಹೇಳಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿರಾಟ್ ಕೊಹ್ಲಿ ವಿಶ್ವದ ಖ್ಯಾತ ಕ್ರಿಕೆಟಿಗ. ಅವರು ಎಲ್ಲೇ ಹೋದರೂ ಕ್ಯಾಮರಾ ಕಣ್ಣುಗಳು ಅವರ ಮೇಲಿರುತ್ತವೆ. ಭಾರತದ ಮಾಧ್ಯಮಗಳು ಈಗಾಗಲೇ ಕೊಹ್ಲಿಯ ಮನವಿಗೆ ಬೆಲೆ ಕೊಟ್ಟು ಎಲ್ಲಿಯೂ ಮಕ್ಕಳ ಫೋಟೋ, ವಿಡಿಯೋ ಹಾಕುತ್ತಿಲ್ಲ. ಆದರೆ ತಮ್ಮ ಮನವಿಯನ್ನೂ ಮೀರಿದ ಆಸೀಸ್ ಪತ್ರಕರ್ತರ ಮೇಲೆ ಕೊಹ್ಲಿ ಸಿಟ್ಟು ನೆತ್ತಿಗೇರಿದೆ.
Published by
