
ಡಿಸೆಂಬರ್ 13: ಚಂಡಮಾರುತ ಹಾಗೂ ಹವಾಮಾನದಲ್ಲಿನ ಬದಲಾವಣೆಯ ಕಾರಣದಿಂದಾಗಿ ತಮಿಳನಾಡು ಕರಾವಳಿ ಜಿಲ್ಲೆಗಳು, ಚೆನ್ನೈ ಮತ್ತು ಆಂಧ್ರ ಪ್ರದೇಶ ರಾಜ್ಯದ ವಿವಿಧೆಡೆ ಭಾರೀ ಮಳೆ ಆಗುತ್ತಿದೆ. ಈ ಮಳೆಯು ಮುಂದಿನ ಕೆಲವು ದಿನಗಳ ಕಾಲ ಮುಂದುವರಿಯಲಿದೆ. ಇಂದು ಶುಕ್ರವಾರವು ವ್ಯಾಪಕ ಮಳೆ ಬರುತ್ತಿರುವ ಕಾರಣದಿಂದಾಗಿ ತಮಿಳುನಾಡಿನ ಮಧುರೈ ಮತ್ತು ಮಯಿಲಾಡುತುರೈ ಸೇರಿದಂತೆ ವಿವಿಧ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಭಾರೀ ಮಳೆ ಸುರಿಸುವ ಸಾಧ್ಯತೆ ಇದೆ. ಮತ್ತೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಪರೀತ ಮಂಜು ಕವಿದ ವಾತಾವರಣ ಕಂಡು ಬರುವ ನಿರೀಕ್ಷೆ ಇದೆ ಹವಾಮಾನ ತಜ್ಞರು ತಿಳಿಸಿದ್ದಾರೆ.
ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಅತ್ಯಧಿಕ ಮಳೆ ಆಗಲಿದೆ. ಹೀಗಾಗಿ ಮಧುರೈ ಮತ್ತು ಮಯಿಲಾಡುತುರೈ ಜಿಲ್ಲಾಡಳಿತ ಅಲ್ಲಿನ ಶಾಲೆಗಳಿಗೆ ಶುಕ್ರವಾರ ಸಾರ್ವತ್ರಿಕ ರಜೆ ಘೋಷಿಸಿವೆ.
ಕಳೆದೊಂದು ವಾರದಿಂದ ಚೆನ್ನೈ, ಮಧುರೈ ಸೇರಿದಂತೆ ತಮಿಳುನಾಡಿನ ಕರಾವಳಿ ಜಿಲ್ಲೆಗಳು, ಆಂಧ್ರ ಪ್ರದೇಶ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಕರ್ನಾಟಕ ಒಂದೆರಡು ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಮುಂದಿನ ಮೂರು ದಿನ ಇದೇ ರೀತಿ ಮಬ್ಬ ವಾತಾವರಣ, ಚಳಿ ಗಾಳಿ, ಮಳೆ ಮುಂದುವರಿಯಲಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದಿಂದಾಗಿ ಕಳೆದೊಂದು ವಾರದಿಂದ ದಕ್ಷಿಣ ಭಾರತದ ನಾಲ್ಕೈದು ರಾಜ್ಯಗಳಲ್ಲಿ ಬಿಸಿಲು ಕಣ್ಮರೆಯಾದಂತಾಗಿದೆ. ಶ್ರೀಲಂಕಾ ದೇಶ, ಚೆನ್ನೈ ಮಹಾನಗರ ಹಾಗೂ ಕಳೆದ ಮೂರು ದಿನಗಳಿಂದ ಕರ್ನಾಟಕದ ಬೆಂಗಳೂರಿನಲ್ಲಿ ತಾಪಮಾನ ಇಳಿಕೆ ಆಗಿದೆ.
ಹಿಂಗಾರು ಸಂದರ್ಭದಲ್ಲಿ ಇನ್ನಿಲ್ಲದಂತೆ ಕಾಡುತ್ತಿದ್ದ ಒಣಹವೆ, ಬಿಸಿಲ ತಾಪ ಮರೆಯಾಗಿದ್ದು, ಎಲ್ಲೆಲ್ಲೂ ಜಿಟಿಯಿಂದ ಸಾಧಾರಣೆ ಮಳೆ, ಕೆಲವೆಡೆ ಭಾರೀ ಮಳೆ ಅಬ್ಬರಿಸುತ್ತಿದೆ. ಚಳಿ ಹಾಗೂ ಶೀತವಾತಾವರಣ ಉಂಟಾಗಿದೆ. ಹವಾಮಾನದಲ್ಲಿ ಬದಲಾವಣೆಗಳು ಹೀಗೆ ದಿಢೀರ್ ಮಳೆಗೆ ಕಾರಣವಾಗಿದೆ.
ಕರ್ನಾಟಕ ಮಳೆ ಮುನ್ಸೂಚನೆ ಏನು?
ಕರ್ನಾಟಕದಲ್ಲಿ ಇಂದು ಶುಕ್ರವಾರ (ಡಿಸೆಂಬರ್ 13) ಸಹ ಸುಮಾರು 08 ಜಿಲ್ಲೆಗಳಿಗೆ ಭಾರೀ ಮಳೆ ಆಗುವ ಮುನ್ಸೂಚನೆ ಇದೆ. ಕೋಲಾರ, ಮಂಡ್ಯ, ಮೈಸೂರು, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಆಗಲಿದ್ದು, ಐಎಂಡಿ ಹಳದಿ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಬ್ಬು ವಾತವರಣ ಶುರುವಾಗಿದ್ದ, ಜಿಟಿ ಜಿಟಿ ಮಳೆ ಆಗುತ್ತಲೆ ಇದೆ.
Published by
✍️ಪ್ರಶಾಂತ್ ಎಚ್ ವಿ
