ಬೆಂಗಳೂರು, ಡಿಸೆಂಬರ್ 24: ಕರ್ನಾಟಕದಲ್ಲಿ ಒಟ್ಟೊಟ್ಟಿಗೆ ಮೂರು ಕಾಲಗಳಿಗೆ ಜನರು ಸಾಕ್ಷಿಯಾಗಿದ್ದಾರೆ. ಕೆಲವು ವಾರಗಳಿಂದ ಬಿಸಿಲು, ಅತೀವ ಚಳಿ ಜೊತೆಗೆ ಗರಿಷ್ಠ ತಾಪಮಾನಕ್ಕೂ ಸಾಕ್ಷಿಯಾಗುತ್ತಿದ್ದಾರೆ. ಇದೀಗ ಸಮುದ್ರ ಮೇಲ್ಮೈನಲ್ಲಿ ಮತ್ತೆ ಬದಲಾವಣೆ ಆಗಿದೆ. ವಾಯುಭಾರ ಕುಸಿತಗೊಂಡಿದ್ದು, ಇದರ ಪ್ರಭಾವದಿಂದಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ 05 ದಿನಗಳ ವರೆಗೆ ವ್ಯಾಪಕ ಮಳೆ ಸಾಧ್ಯತೆ ಇದೆ.
ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಪ್ರಾದೇಶಿಕ ಕಚೇರಿ ನೀಡಿರುವ ಮಳೆ ಮುನ್ಸೂಚನೆ ಪ್ರಕಾರ, ಡಿಸೆಂಬರ್ 28ರವರೆಗೆ ರಾಜ್ಯದಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗಲಿದೆ. ವಿವಿಧ ಜಿಲ್ಲೆಗಳ ಮೇಲೆ ವಾಯುಭಾರತ ಕುಸಿತದ ಪ್ರಭಾವದಿಂದಾಗಿ ಆಗಾಗ ಜೋರು ಮಳೆ ಬೀಳುವ ನಿರೀಕ್ಷೆ ಇದೆ.
ಇಂದು ಕರಾವಳಿ ಭಾಗಕ್ಕೆ ಚಂಡಮಾರುತ ಪರಿಚಲನೆ..
ಬಂಗಾಳಕೊಲ್ಲಿಯ ಪಶ್ಚಿಮ ಭಾಗದ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಅದು ಅಲ್ಲಿಂದ ನೈಋತ್ಯ ದಿಕ್ಕಿನ ಕಡೆಗೆ ಚಲಿಸುತ್ತಿದೆ. ದಕ್ಷಿಣ ಆಂಧ್ರಪ್ರದೇಶ-ಉತ್ತರ ತಮಿಳುನಾಡು ಕರಾವಳಿಯಿಂದ ದೂರದಲ್ಲಿ ನೆಲೆಗೊಂಡಿದ್ದು, ಮಂಗಳವಾರ ಕರಾವಳಿಗೆ ಮತ್ತಷ್ಟು ಸಮೀಪಿಸುವ ಸಾಧ್ಯತೆ ಇದೆ.
ಈ ವಾಯುಭಾರ ಕುಸಿತವು ಚಂಡಮಾರುತ ಪರಿಚಲನೆಯ ರೀತಿಯಲ್ಲಿದೆ. ಇದು ಸಮುದ್ರ ಮಟ್ಟದಿಂದ ಸರಾಸರಿ 3.1 ಕಿ.ಮೀ.ವರೆಗೆ ವಿಸ್ತರಿಸಿಕೊಂಡಿದೆ. ಇಂದು ಡಿ.24ರಂದು ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯತ್ತ ವೇಗವಾಗಿ ಸಾಗಿ ಬರಬಹುದು ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಹವಾಮಾನದಲ್ಲಿ ಬದಲಾವಣೆಗಳ ಕಾರಣದಿಂದಾಗಿ ಮುಂದಿನ ಐದು ದಿನಗಳ ಪೈಕಿ ಮೊದಲ ಮೂರು ದಿನ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೋಲಾ, ಮಂಡ್ಯ, ಶಿವಮೊಗ್ಗ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಇಲ್ಲವೇ ಹಗುರ ಮಳೆ ಬರಬಹುದು.
ನಂತರ ಡಿಸೆಂಬರ್ 27 ಮತ್ತು 28ರಂದು ಈ ಮೇಲಿನ ಎಲ್ಲ ಜಿಲ್ಲೆಗಲ್ಲಿ ಮಳೆ ಮತ್ತಷ್ಟು ಚುರುಕು ಪಡೆಯುವ ನಿರೀಕ್ಷೆ ಇದೆ. ಏಕೆಂದರೆ ಅಷ್ಟೊತ್ತಿಗಾಗಿ ವಾಯುಭಾರ ಕುಸಿತವು ಮತ್ತಷ್ಟು ತೀವ್ರಗೊಂಡು ಕರಾವಳಿ ಭಾಗಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ. ಹೀಗಾಗಿ ಐದು ದಿನಗಳ ಪೈಕಿ ಕೊನೆಯ ಎರಡು ದಿನ ಭಾರೀ ಮಳೆಯ ಸಂಭವವಿದೆ ಎಂದು ಐಎಂಡಿ ಹವಾಮಾನ ತಜ್ಞರು ತಿಳಿಸಿದ್ದಾರೆ.
ಹೊಸ ವರ್ಷಾಚರಣೆಗೆ ಬ್ರೇಕ್?
ಬಂಗಾಳಕೊಲ್ಲಿಯಲ್ಲಿನ ಚಂಡಮಾರುತ ಪರಿಚಲನೆಯು ಮುಂದಿನ ಮೂರು ನಾಲ್ಕು ದಿನಗಳಲ್ಲಿ ಇನ್ನಷ್ಟು ತೀವ್ರಗೊಂಡರೆ, ಕರ್ನಾಟಕದ ದಕ್ಷಿಣ ಒಳನಾಡು ಭಾಗದ ಜಿಲ್ಲೆಗಳಲ್ಲಿ ಅತೀವ ಮಳೆ ಬರಲಿದೆ. ಇದರಿಂದಾಗಿ ಚಳಿ, ಮಳೆ ಆಗಲಿದ್ದು, ಹೊಸ ವರ್ಷಾಚರಣೆಗೆ ಬ್ರೇಕ್ ಬೀಳಲೂಬಹುದು ಎಂದು ಊಹಿಸಲಾಗಿದೆ. ರಾತ್ರಿಪೂರ್ತಿ ನಡೆಯುವ ವರ್ಷಾಚರಣೆಗೆ ಭಾರೀ ಮಳೆಯು ಅಡ್ಡಿಪಡಿಸುವ ಸಾಧ್ಯತೆ ಇದೆ.
Published by
✍️ಪ್ರಶಾಂತ್ ಎಚ್ ವಿ
